ಹಾಸನ | ಕಾಡಾನೆ ದಾಳಿ: ವೃದ್ಧ ಮೃತ್ಯು
ಹಾಸನ: ಜ,22: ಕಾಡಾನೆ ಏಕಾಏಕಿ ದಾಳಿ ನಡೆಸಿ ವೃದ್ಧರೊಬ್ಬರನ್ನು ಕೊಂದ ಘಟನೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪುಟ್ಟಯ್ಯ (78) ಮೃತಪಟ್ಟವರು. ಇವರು ಮಂಗಳವಾರ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಕಾಡಾನೆಯು ಪುಟ್ಟಯ್ಯರನ್ನು ಕಾಲಿನಿಂದ ತುಳಿದು, ಮರಕ್ಕೆ ಅಪ್ಪಳಿಸಿ ಬಿಸಾಡಿದ ಪರಿಣಾಮ, ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಪುಟ್ಟಯ್ಯ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಇಂದು ಬೆಳಗ್ಗೆ ಕಾಫಿ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಆಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ಪ್ರಕಾರ, ಕಾಡಾನೆ ನಿನ್ನೆ ರಾತ್ರಿ ಕಾಫಿ ತೋಟದಲ್ಲಿ ಅಡ್ಡಾಡುತ್ತಿದ್ದು, ಪರಿಸರದಲ್ಲಿ ಆತಂಕ ಉಂಟಾಗಿದೆ. ಕಾಡಾನೆ ಉಪಟಳಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಕ್ರಮಕ್ಕೆ ಆಗ್ರಹಿಸಿದ್ದಾರೆ.