×
Ad

ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು | ಆಟೋ, ಬಿಎಂಟಿಸಿ ಬಸ್‌ ಚಾಲಕ ಮೃತ್ಯು

Update: 2025-06-28 20:20 IST

ಸಾಂದರ್ಭಿಕ ಚಿತ್ರ | PC : grok

ಹಾಸನ : ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಮರಣ ಮೃದಂಗ ಮುಂದುವರಿದಿದ್ದು, ಶನಿವಾರ ಸಹ ಹೃದಯಾಘಾತಕ್ಕೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಹಾಸನದ ಆಟೋ ಚಾಲಕ ಗೋವಿಂದ(35), ಸಂಜೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದ ಗಿರೀಶ್ ( 41) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನಗರದ ಸಿದ್ದೇಶ್ವರ ನಗರದ ನಿವಾಸಿ ಗೋವಿಂದ(37) ಮೃತ ವ್ಯಕ್ತಿ. ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರೇ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ಹೋಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮುನ್ನವೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದ ಗಿರೀಶ್ ( 41) ಜೋಳದ ಹೊಲಕ್ಕೆ ಗೊಬ್ಬರ ಹಾಕಿ ಮಧ್ಯಾಹ್ನ ಮನೆಗೆ ಬಂದ ಗಿರೀಶ್ ಕುಸಿದು ಬಿದ್ದರು. ಅವರನ್ನು ಗ್ರಾಮಸ್ಥರು ತಕ್ಷಣ ಹಾಸನಕ್ಕೆ ಚಿಕಿತ್ಸೆಗಾಗಿ ಕರೆ ತರುವ ವೇಳೆಗೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಗಿರೀಶ್ ಅವರು ಬಿಎಂಟಿಸಿ ಚಾಲಕರಾಗಿದ್ದು, ರಜೆ ಇದ್ದ ಕಾರಣ ಊರಿಗೆ ಬಂದು ಜೋಳದ ಹೊಲಕ್ಕೆ ತೆರಳಿದ್ದರು.

ಇದರಿಂದ ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ ಅಂದರೆ ಮೇ 28ರಿಂದ ಇಲ್ಲಿಯವರೆಗೆ 19, 20 ವರ್ಷದ ಯುವಕ-ಯುವತಿಯರು ಸೇರಿದಂತೆ ఒట్టు 18 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದು ಸಹಜವಾಗಿಯೇ ಆತಂಕ ತರಿಸಿದೆ. 

2 ವರ್ಷದಲ್ಲಿ 507 ಮಂದಿ ಸಾವು:

ಕಳೆದೆರಡು ವರ್ಷಗಳ ಅಂಕಿ ಅಂಶ ಗಮನಿಸಿದಾಗ  507 ಜನರು ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇವರಲ್ಲಿ 20 ರಿಂದ 30 ವಯಸ್ಸಿನ 14 ಮಂದಿ, 30 ರಿಂದ 40 ವಯಸ್ಸಿನ 40 ಹಾಗೂ 40 ವರ್ಷ ಮೇಲ್ಪಟ್ಟ 136 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯಿಂದ ತಿಳಿದು ಬಂದಿದೆ.

 ʼಹೃದಯ ಆರೋಗ್ಯʼದ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನ :

ಹೃದಯಾಘಾತ ತಡೆ ಸಂಬಂಧ ಸಂಸದರ ನೇತೃತ್ವದಲ್ಲಿ ಎಲ್ಲಾ ಅರೋಗ್ಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಲಾಗಿದೆ. ಆರೋಗ್ಯ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಮಾಡಲಾಗುವುದು. ಶಾಲಾ ಕಾಲೇಜುಗಳಲ್ಲಿ ಹೃದಯ ಆರೋಗ್ಯದ ತಪಾಸಣೆ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಡಿಎಚ್‌ಒ ಡಾ.ಅನಿಲ್ ತಿಳಿಸಿದ್ದಾರೆ.

ಎದೆ ನೋವು ಕಂಡು ಬಂದರೆ ನಿರ್ಲಕ್ಷ್ಯ ಬೇಡ. ಎದೆ ನೋವನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಂಡು ತುರ್ತು ಚಿಕಿತ್ಸೆ ಪಡೆದರೆ ಅಕಾಲಿಕ ಸಾವು ತಡೆಯಬಹುದು. ಈ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು.

-ಆಶ್ರಿತ್ ಶ್ರೀಧರ್, ಹೃದ್ರೋಗ ತಜ್ಞ

ಹೃದಯಾಘಾತಕ್ಕೆ ಬಲಿಯಾದವರು : ಸಂಧ್ಯಾ (20) ಹೊಳೆನರಸೀಪುರ, ಅಭಿಷೇಕ್ (19) ಅರಕಲಗೂಡು, ನಿಶಾಂತ್ (20) ಹೊಳೆನರಸೀಪುರ, ಕವನ(20) ಕೆಲವತ್ತಿ(ಹಾಸನ), ನಾಗಪ್ಪ(55) ಮಗ್ಗೆ (ಆಲೂರು), ನೀಲಕಂಠಪ್ಪ (58) ಹಾಸನ, ದೇವರಾಜ್ (43) ದುಮ್ಮಗೆರೆ, ಹಾಸನ, ಕಾಂತರಾಜು(51) ದೊಡ್ಡಪುರ, ಹಾಸನ, ನವೀನ್‌ಕುಮಾರ್ (31) ಅರಸೀಕೆರೆ, ತೀರ್ಥಪ್ಪ (68) ಬೇಲೂರು, ನಿಶಾದ್ ಅಹ್ಮದ್ (35) ಬೇಲೂರು, ಚೇತನ್ (38) ಸತ್ಯಮಂಗಲ,ಹಾಸನ, ಯೋಗೇಶ್ ಎಂ.ಕೆ.(32) ಚನ್ನರಾಯಪಟ್ಟಣ, ಸುಪ್ರಿಯಾ(22) ಹೊಳೆನರಸೀಪುರ, ಮಂಜುನಾಥ್ (51) ಹಾಸನ, ಗೋವಿಂದ(37) ಹಾಸನ, ಗಿರೀಶ್ ( 41) ಹಾಸನ, ಸತೀಶ್(57) ಹಾಸನ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಲ್ನಾಡ್ ಮೆಹಬೂಬ್

contributor

Similar News