×
Ad

ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು; ಮತ್ತೆ ಮೂವರು ಮೃತ್ಯು

Update: 2025-06-30 13:51 IST

ಸಾಂದರ್ಭಿಕ ಚಿತ್ರ | PC : freepik

ಹಾಸನ : ಜಿಲ್ಲೆಯಲ್ಲಿನ ಪ್ರತ್ಯೇಕ ಪ್ರಕರಣಗಳಲ್ಲಿ ಹೃದಯಾಘಾತಕ್ಕೆ ಮತ್ತೆ ಮೂವರು ಬಲಿಯಾಗಿದ್ದು, ವಾರದಲ್ಲಿ ಏಳು ಜನರು ಜೀವ ಕಳೆದುಕೊಂಡಿದ್ದಾರೆ. 

ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆ.ಪಿ.ನಗರದಲ್ಲಿ ಗೃಹಿಣಿ ಲೇಪಾಕ್ಷಿ (50) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲೇಪಾಕ್ಷಿ ಅವರ ಪತಿ ನಾಗರಾಜು ಹಿಟ್ಟಿನ ಗಿರಣಿ ನಡೆಸುತ್ತಿದ್ದಾರೆ.

ಬೆಳಿಗ್ಗೆ ಮನೆಯಲ್ಲಿದ್ದಾಗ ಲೇಪಾಕ್ಷಿ ಅವರು ಸುಸ್ತು ಎಂದು ತಿಳಿಸಿದ್ದು, ಕೂಡಲೇ ಕುಟುಂಬಸ್ಥರು ಅವರನ್ನು ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಿ ಲೇಪಾಕ್ಷಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಹೃದಯಾಘಾತಕ್ಕೆ ಡಿ ಗ್ರೂಪ್ ನೌಕರ ಮೃತ್ಯು:

ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ನಾಡ ಕಚೇರಿಯ ಡಿ ಗ್ರೂಪ್ ನೌಕರ ಕುಮಾರ್ (57) ಅವರು ಹೃದಯಾಘಾತದಿಂದ ಮೃತಪಟಿದ್ದಾರೆ. ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಕುಮಾ‌ರ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಬಸ್ಥರು ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ.

ಕುಮಾ‌ರ್ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಮಾಹಿತಿ ದೊರೆತಿದೆ.

ಹೃದಯಾಘಾತಕ್ಕೆ ಪ್ರೊಫೆಸರ್ ಬಲಿ:

ಹೊಳೆನರಸೀಪುರದಲ್ಲಿ ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಮುತ್ತಯ್ಯ (58) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣದ ನಿವಾಸಿಯಾಗಿದ್ದ ಮುತ್ತಯ್ಯ, ಇಂದು ಬೆಳಿಗ್ಗೆ ಕಾಲೇಜಿಗೆ ಬಂದ ವೇಳೆ ಹೊಳೆನರಸೀಪುರ ಬೈಪಾಸ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರಾದರೂ, ಆಗಲೇ ಮುತ್ತಯ್ಯ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ.

ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಈ ಘಟನೆಗಳು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News