×
Ad

ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು: ಮತ್ತೆ ಮೂವರು ಮೃತ್ಯು

Update: 2025-07-03 15:56 IST

                                                   ಸಂತೋಷ್/ ಸಂಪತ್‌ ಕುಮಾರ್‌/ವಿರೂಪಾಕ್ಷ

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಸರಣಿ ಮುಂದುವರಿದಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ಜಿಲ್ಲೆಯಾದ್ಯಂತ 30 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಗುರುವಾರ ವರದಿಯಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಆಲೂರು ತಾಲ್ಲೂಕಿನ ಕಲ್ಲಾರೆ ಗ್ರಾಮದ ಕಾರಗೋಡು ಗ್ರಾಮ ಪಂಚಾಯಿತಿಯ ಸದಸ್ಯ ಸಂತೋಷ್ (41), ಹಾಸನ ನಗರದ ಕರಿಗೌಡ ಕಾಲೋನಿಯ ಸಂಪತ್‌ಕುಮಾರ್ (53), ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ.ವಿರೂಪಾಕ್ಷ (70) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯನಿಗೆ ಹೃದಯಾಘಾತ:

ಆಲೂರು ತಾಲ್ಲೂಕಿನ ಕಲ್ಲಾರೆ ಗ್ರಾಮದ ಕಾರಗೋಡು ಗ್ರಾಮ ಪಂಚಾಯಿತಿಯ ಸದಸ್ಯ ಸಂತೋಷ್ (41) ರಾತ್ರಿ ಮಲಗಿದ್ದ ವೇಳೆ ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ಕುಟುಂಬಸ್ಥರು ಎಚ್ಚರಗೊಂಡಾಗ ಸಂತೋಷ್ ಅವರ ದೇಹದಲ್ಲಿ ಚಲನೆ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಹಾಸನ ನಗರದಲ್ಲಿ ಒಬ್ಬರು ಸಾವು:

ಹಾಸನ ನಗರದ ಕರಿಗೌಡ ಕಾಲೋನಿಯ ಸಂಪತ್‌ಕುಮಾರ್ (53) ಕೂಡ ಹೃದಯಾಘಾತದಿಂದ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ದಿಢೀರ್ ಎದೆನೋವು ಕಾಣಿಸಿಕೊಂಡ ಕಾರಣ ಕುಟುಂಬಸ್ಥರು ಅವರನ್ನು ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಪತ್‌ಕುಮಾರ್ ಮೃತಪಟ್ಟಿದ್ದಾರೆ.

ಸಕಲೇಶಪುರದಲ್ಲಿ ಸಾವು:

ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ.ವಿರೂಪಾಕ್ಷ (70) ಕಳೆದ ರಾತ್ರಿ 11:300 ಸುಮಾರಿಗೆ ಎದೆನೋವಿನಿಂದ ಬಳಲಿದ್ದಾರೆ. ಕುಟುಂಬಸ್ಥರು ಕೂಡಲೇ ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ವಿರೂಪಾಕ್ಷ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News