ಭಾರೀ ಮಳೆಯಿಂದ ಭೂಕುಸಿತ | ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತ
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿಘಾಟ್ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಮಾರನಹಳ್ಳಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ನಿಲ್ಲಿಸಿದ್ದು, ಬದಲಿ ಮಾರ್ಗ ಬಳಸುವಂತೆ ಚಾಲಕರಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಸಾವಿರಾರು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಶಿರಾಡಿಘಾಟ್ ರಸ್ತೆಯ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಮರ-ಗಿಡಗಳ ಸಮೇತ ಮಣ್ಣು ರಸ್ತೆಗೆ ಜಾರಿ ಬಿದ್ದಿದೆ. ಇದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ವಾರಾಂತ್ಯ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಿರುವುದರಿಂದ ಶಿರಾಡಿಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸದ್ಯ ನೂರಾರು ವಾಹನಗಳು ರಸ್ತೆ ಮಧ್ಯೆ ನಿಂತಿರುವುದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.