ಸಕಲೇಶಪುರ | ಕೆಎಸ್ಸಾರ್ಟಿಸಿ ಬಸ್ಸುಗಳ ನಡುವೆ ಅಪಘಾತ; 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
Update: 2025-07-24 16:10 IST
ಸಕಲೇಶಪುರ : ಕೆಎಸ್ಸಾರ್ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರ ಪೈಕಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಬಸ್ ಚಾಲಕ ಸೇರಿ 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಬಸ್ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಹಾಗೆಯೇ ಮತ್ತೊಂದು ಸಾರಿಗೆ ಬಸ್ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಶಿರಾಡಿಘಾಟ್ ರಸ್ತೆಯ ಮಾರನಹಳ್ಳಿ ಬಳಿ ಎರಡೂ ಬಸ್‌ಗಳ ಮುಖಾಮುಖಿ ಅಪಘಾತ ಸಂಭವಿಸಿದೆ.
ಕೂಡಲೇ ಗಾಯಾಳುಗಳನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಢಿಕ್ಕಿ ರಭಸಕ್ಕೆ ಒಂದು ಸಾರಿಗೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.