ಸಕಲೇಶಪುರ | 100 ಅಡಿ ಆಳದ ಹಳ್ಳಕ್ಕೆ ಉರುಳಿ ಬಿದ್ದ ಕಾರು
Update: 2025-10-24 16:08 IST
ಸಕಲೇಶಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಅಡಿ ಆಳದ ಹಳ್ಳಕ್ಕೆ ಬಿದ್ದ ಘಟನೆ ಸಕಲೇಶಪುರ ತಾಲೂಕಿನ ಶಿರಾಡಿ ರಸ್ತೆಯ ಮಾರನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಶಿವಮೊಗ್ಗದ ಶಿಕ್ಷಕ ಗೋವಿಂದ ನಾಯ್ಕ್ ಎಂಬವರಿಗೆ ಸೇರಿದ ಕಾರು ಇದಾಗಿದೆ. ಗೋವಿಂದ ನಾಯ್ಕ್ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಶಿವಮೊಗ್ಗದಿಂದ ಬೆಳ್ತಂಗಡಿಯ ಗುರುವಾಯನಕೆರೆಯ ನವೋದಯ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇವರಿದ್ದ ಕಾರು ಮಾರನಹಳ್ಳಿಯಲ್ಲಿ ನ್ಯೂ ಸ್ಟಾರ್ ಹೋಟೆಲ್ ಬಳಿ ತಲುಪಿದಾಗ ತಡೆಗೋಡೆ ಇಲ್ಲದ ರಸ್ತೆ ಬದಿಯಿಂದ ಹಳ್ಳಕ್ಕೆ ಉರುಳಿಬಿದ್ದಿದೆ.
ಸುಮಾರು 100 ಅಡಿ ಆಳದ ಹಳ್ಳಕ್ಕೆ ಕಾರು ಬಿದ್ದರೂ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆಂದು ತಿಳಿದುಬಂದಿದೆ.