×
Ad

1 ಕೆಜಿ ಕೊಬ್ಬು ಕರಗಿಸಲು ಎಷ್ಟು ನಡೆಯಬೇಕು?

Update: 2025-12-25 16:48 IST

ಸಾಂದರ್ಭಿಕ ಚಿತ್ರ | Photo Credit : freepik.com


1 ಕೆಜಿ ಕೊಬ್ಬು ಸುಮಾರು 7700 ಕ್ಯಾಲರಿಗಳಿಗೆ ಸಮಾನ. ನಿಜವಾದ ಕೊಬ್ಬು ಸಂಗ್ರಹಿತ ಶಕ್ತಿಯಾಗಿರುವ ಕಾರಣದಿಂದ ಅದರ ನಷ್ಟಕ್ಕೆ ಸಮಯ ಬೇಕಾಗುತ್ತದೆ.

ದಿನನಿತ್ಯವೂ ನಿರ್ದಿಷ್ಟ ಸಮಯ ನಡೆದರೂ ತೂಕ ಕಳೆದುಕೊಳ್ಳುವ ಸೂಚನೆಯೇ ಇರುವುದಿಲ್ಲ ಎಂದು ನಿಮಗೆ ಅನಿಸಿದ್ದಿದೆಯೆ? ಹಾಗಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ದೂರವನ್ನು ನೀವು ಕ್ರಮಿಸದೆ ಇರಬಹುದು. ಆದರೆ ಚಿಂತೆ ಬೇಡ. 1 ಕೆಜಿ ಕೊಬ್ಬನ್ನು ಕರಗಿಸಲು ಎಷ್ಟು ನಡಿಗೆ ಅಗತ್ಯವಿದೆ ಎನ್ನುವ ಲೆಕ್ಕಾಚಾರ ಬಹಳ ಸರಳ.

ಕೊಬ್ಬು ಕರಗಿಸುವ ವಿಜ್ಞಾನಕ್ಕೆ ಸಂಬಂಧಿಸಿದ ತಜ್ಞರಾಗಿರುವ ಅಂಜಲಿ ಸಚನ್ ಹೇಳುವ ಪ್ರಕಾರ, ಅತಿ ಪರಿಣಾಮಕಾರಿಯಾಗಿ ಮತ್ತು ಸುಸ್ಥಿರ ರೀತಿಯಲ್ಲಿ ತೂಕ ಇಳಿಸಲು ಬಯಸುವವರಿಗೆ ನಡಿಗೆಯೇ ಔಷಧ. ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವೀಡಿಯೋ ಒಂದರಲ್ಲಿ 1 ಕೆಜಿ ಕೊಬ್ಬು ಕರಗಿಸಲು ಎಷ್ಟು ನಡೆಯಬೇಕು ಎನ್ನುವ ವಿವರ ನೀಡಿದ್ದಾರೆ.

ನಡಿಗೆ ಮತ್ತು ಕೊಬ್ಬು ಕರಗಿಸುವ ವಿಜ್ಞಾನ

ಅಂಜಲಿ ಸಚನ್ ಹೇಳುವ ಪ್ರಕಾರ, 1 ಕೆಜಿ ಕೊಬ್ಬು ಸುಮಾರು 7700 ಕ್ಯಾಲರಿಗಳಿಗೆ ಸಮಾನ. “ಈ ಸಂಖ್ಯೆ ಬಹಳ ದೊಡ್ಡದು. ಇದು ವಾಸ್ತವದಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಂಶ. ಇದರಲ್ಲಿ ನೀರಿನಂಶದ ತೂಕ, ಹೊಟ್ಟೆ ಉಬ್ಬರಿಸಿದ ತೂಕ ಅಥವಾ ಗ್ಲೈಕೊಜೆನನ್ನ ತೂಕ ಸೇರಿರುವುದಿಲ್ಲ. ನಿಜವಾದ ಕೊಬ್ಬು ಸಂಗ್ರಹಿತ ಶಕ್ತಿಯಾಗಿರುವ ಕಾರಣದಿಂದ ಅದರ ನಷ್ಟಕ್ಕೆ ಸಮಯ ಬೇಕಾಗುತ್ತದೆ. ಒಮ್ಮೆ ಅದನ್ನು ಕರಗಿಸಿದರೆ ನಂತರ ಬರುವುದಿಲ್ಲ” ಎನ್ನುತ್ತಾರೆ ಅಂಜಲಿ.

ಅಂಜಲಿ ಹೇಳುವ ಪ್ರಕಾರ ನಡಿಗೆಯಲ್ಲಿ ಕ್ಯಾಲರಿ ಕರಗಿಸಲು ಸಾಧ್ಯವಿದೆ. 1000 ಹೆಜ್ಜೆಗಳನ್ನು ಹಾಕಿದರೆ 50-70 ಕ್ಯಾಲರಿಗಳನ್ನು ಕರಗಿಸಬಹುದು. ಪ್ರತಿ ಹೆಜ್ಜೆ ಇಡುವಾಗಲೂ ಸ್ನಾಯುಗಳನ್ನು ಚಲಿಸಲು, ಸಮತೋಲನ ಕಾಪಾಡುವುದು ಮತ್ತು ಹೃದಯದ ದರವನ್ನು ನಿಯಮಿತವಾಗಿಡಲು ನಿಮ್ಮ ದೇಹ ಶಕ್ತಿಯನ್ನು ಬಳಸುತ್ತದೆ. ಹೀಗಾಗಿ ನೀವು 1 ಕೆಜಿ ಕೊಬ್ಬು ಕರಗಿಸಲು ಸರಿಸುಮಾರು 1,28,000 ರಿಂದ 1,50,000 ಹೆಜ್ಜೆಗಳನ್ನು ಇಡಬೇಕಾಗುತ್ತದೆ!

ಇದು ಸಣ್ಣ ಕೆಲಸವೇನಲ್ಲ ಎಂದು ಅನಿಸುತ್ತದೆಯೆ? ನಿತ್ಯವೂ ಸರಿಸುಮಾರು 10,000-15,000 ಹೆಜ್ಜೆಗಳನ್ನು ಹಾಕಿದರೆ 10ರಿಂದ 12 ದಿನಗಳಲ್ಲಿ ನೀವು ಒಂದು ಕೆಜಿ ಕೊಬ್ಬನ್ನು ಕರಗಿಸಬಹುದು. ಶಿಸ್ತಿನ ಆಹಾರ, ವ್ಯಾಯಾಮ ಅಥವಾ ನಿತ್ಯದ ಸಹಜವಾದ ಕ್ಯಾಲರಿ ನಷ್ಟವನ್ನು ಹೊರತುಪಡಿಸಿ ಇಷ್ಟು ಕೊಬ್ಬನ್ನು ಕರಗಿಸಬಹುದಾಗಿದೆ. ಮುಖ್ಯವಾಗಿ ಕೊಬ್ಬು ಕರಗಿಸುವುದೆಂದರೆ ನಿರಂತರವಾಗಿ ಮಾಡುವ ಕೆಲಸ. ಒಂದು ದಿನದಲ್ಲಿ ಕೊಬ್ಬು ಕರಗಿಸುವ ಜಾದೂ ಮಾಡಲು ಸಾಧ್ಯವಿಲ್ಲ. ನಿತ್ಯವೂ ಹೆಜ್ಜೆ ಇಡುವುದು ಎಂದರೆ ನಿತ್ಯವೂ ಕ್ಯಾಲರಿ ಕರಗಿಸುವುದು ಆಗಿರುತ್ತದೆ.

ನಡಿಗೆಯಿಂದ ಏನು ಲಾಭವಿದೆ?

- ಕ್ಯಾಲರಿಗಳನ್ನು ಕರಗಿಸಬಹುದು

- ನಿಧಾನವಾಗಿ ಕೊಬ್ಬು ಕರಗಿಸಬಹುದು

- ಅತಿಯಾದ ವ್ಯಾಯಾಮದಿಂದ ಆಗುವಂತಹ ಹಸಿವೆ ಇರುವುದಿಲ್ಲ

- ಹಾರ್ಮೋನುಗಳು ಮತ್ತು ಋತುಚಕ್ರದ ಮೇಲೆ ಪರಿಣಾಮ ಇರುವುದಿಲ್ಲ.

- ಸುಸ್ತಾಗುವುದು ಇರುವುದಿಲ್ಲ.

- ಮನೋಬಲ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ.

ಪ್ರಮುಖ ಲಾಭವೇನು?

ಒಂದು ದೊಡ್ಡ ವ್ಯಾಯಾಮ ಮಾಡಿ ತೂಕ ಇಳಿಸಲು ಸಾಧ್ಯವಿಲ್ಲ. ನಿತ್ಯವೂ ನಡೆದಾಡುವುದರಿಂದ ಉತ್ತಮ ಆರೋಗ್ಯ ಲಾಭವೂ ಇರುತ್ತದೆ ಮತ್ತು ಕೊಬ್ಬು ಕೂಡ ಕರಗುತ್ತದೆ. ಕೊಬ್ಬು ಕರಗಿಸುವುದು ಜಾದೂ ತಂತ್ರವಲ್ಲ, ನಿತ್ಯವೂ ಮಾಡಬೇಕಾದ ಕೆಲಸ ಎನ್ನುವುದನ್ನು ನೆನಪಿನಲ್ಲಿಡಬೇಕು.

ಕೃಪೆ; ndtv.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News