ಮತ್ತೆ ಸದ್ದು ಮಾಡುತ್ತಿರುವ ನಿಫಾ ಜ್ವರ

ಪತ್ತೆ ಹಚ್ಚುವುದು ಹೇಗೆ? ರೋಗ ಪೀಡಿತ ವ್ಯಕ್ತಿಯ ಮೂಗಿನ ಮತ್ತು ಗಂಟಲಿನಲ್ಲಿ ಸ್ರವಿಸಿದ ದ್ರವ್ಯವನ್ನು ಪಿಸಿಆರ್ ಪರೀಕ್ಷೆ ಮುಖಾಂತರ ವೈರಾಣು ಪತ್ತೆಯನ್ನು ಮಾಡುತ್ತಾರೆ. ಮೆದುಳಿನ ದ್ರವ, ರಕ್ತ, ಮೂತ್ರದಿಂದಲೂ ವೈರಾಣುವನ್ನು ಪತ್ತೆ ಹಚ್ಚಬಹುದು. ಕೊನೆ ಹಂತದಲ್ಲೂ ಎಲಿಸಾ ಪರೀಕ್ಷೆ ಹಾಗೂ IqG ಮತ್ತು IgM ಎಂಬ ಆ್ಯಂಟಿಬಾಡಿಗಳನ್ನು (ನಿಫಾ ವೈರಾಣುಗಳ ವಿರುದ್ಧ ಉತ್ಪತ್ತಿಯಾದ) ಪತ್ತೆ ಹಚ್ಚಿ ರೋಗ ಪತ್ತೆ ಹಚ್ಚಲಾಗುತ್ತದೆ.

Update: 2023-09-14 04:45 GMT

ನಿಫಾ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ನಿಫಾ ವೈರಸ್, ಆರ್.ಎನ್.ಎ. ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇದಕ್ಕೆ ಸೇರಿದ್ದಾಗಿರುತ್ತದೆ. 1999ರಲ್ಲಿ ಮಲೇಶ್ಯದ ಒಂದು ಸಣ್ಣ ಹಳ್ಳಿಯಾದ ‘ಸಂಗೈ ನಿಫಾ’ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ ‘ನಿಫಾ’ ವೈರಸ್ ಎಂದು ಕರೆಯಲಾಗುತ್ತದೆ. ಆ ಸಂದರ್ಭದಲ್ಲಿ ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಉರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ ನೂರಾರು ಮಂದಿ ಅಸುನೀಗಿದ್ದರು. ರೋಗ ಪೀಡಿತ ಲಕ್ಷಾಂತರ ಹಂದಿಗಳನ್ನು ನಿರ್ಮೂಲನ ಮಾಡಿ ರೋಗವನ್ನು ಹತೋಟಿಗೆ ತರಲಾಗಿತ್ತು. 2001ರಲ್ಲಿ ಭಾರತ ದೇಶದ ಸಿಲಿಗುರಿಯಲ್ಲಿ 66 ಮಂದಿಗೆ ಈ ರೋಗ ತಗಲಿತ್ತು ಮತ್ತು 45 ಮಂದಿ ಸಾವನ್ನಪ್ಪಿದರು. ಮಲೇಶ್ಯ, ಬಾಂಗ್ಲಾ ದೇಶ, ಸಿಂಗಾಪುರ ಮತ್ತು ಭಾರತದಲ್ಲಿ ಕಳೆದ 20 ವರ್ಷಗಳಿಂದಲೂ ಈ ವೈರಾಣು ತೊಂದರೆ ನೀಡುತ್ತಲೇ ಇದೆ. ಇದೀಗ ಕೇರಳದಲ್ಲಿ ನಿಫಾ ಮತ್ತೆ ಸುದ್ದಿ ಮಾಡುತ್ತಿದೆ. ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳದಿದ್ದಲ್ಲಿ ಬಹುಬೇಗ ಎಲ್ಲೆಡೆ ಪಸರಿಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಜನತೆ ಮತ್ತು ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.

ರೋಗ ಲಕ್ಷಣಗಳು

ಎಲ್ಲಾ ವೈರಲ್ ಜ್ವರಗಳಲ್ಲಿ ಇರುವಂತೆ ಈ ಜ್ವರದಲ್ಲಿಯೂ ತೀವ್ರತರವಾದ ಜ್ವರ, ವಿಪರೀತ ತಲೆನೋವು, ವಾಂತಿ, ತಲೆಸುತ್ತು, ಮೈಕೈ ನೋವು ಇರುತ್ತದೆ. ರೋಗದ ತೀವ್ರತೆ ಜಾಸ್ತಿಯಾದಾಗ ಪ್ರಜ್ಞಾಹೀನತೆ ಮತ್ತು ಅಪಸ್ಮಾರದ ಅನುಭವ ಊಂಟಾಗುತ್ತದೆ. ಸುಮಾರು 6ರಿಂದ 12 ದಿವಸಗಳ ಕಾಲ ಈ ರೋಗದ ಲಕ್ಷಣ ಇರುತ್ತದೆ. ಕೊನೆಹಂತದಲ್ಲಿ ತಲೆ, ಮೆದುಳಿಗೂ ಹರಡುತ್ತದೆ ಮತ್ತು ಹೃದಯದ ಸ್ನಾಯುಗಳಿಗೆ ಹರಡಿ ಸ್ನಾಯುಗಳನ್ನು ಹಾಳುಗೆಡುವುತ್ತದೆ. ಮೆದುಳಿನ ಉರಿಯೂತ ಉಂಟಾಗುತ್ತದೆ. ವೈರಾಣು ದೇಹಕ್ಕೆ ಸೇರಿದ ಬಳಿಕ 5ರಿಂದ 14 ದಿನಗಳ ಮೇಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಜ್ವರದ ತೀವ್ರತೆ ಜಾಸ್ತಿಯಾಗಿ 24 ರಿಂದ 48 ಗಂಟೆಗಳ ಒಳಗೆ ಕೋಮಾವಾಸ್ಥೆಗೆ ತಲುಪಬಹುದು. ಸಾಮಾನ್ಯ ಜ್ವರ ಎಂದು ಕಡೆಗಣಿಸಿದ್ದಲ್ಲಿ ಜೀವಕ್ಕೇ ಕುತ್ತು ತರಬಹುದು.

ಹೇಗೆ ಹರಡುತ್ತದೆ?

* ರೋಗ ಸೋಂಕಿತ ವ್ಯಕ್ತಿಯ ದೈಹಿಕ ಸಂಪರ್ಕ, ಸ್ಪರ್ಶದಿಂದ ವೈರಾಣು ಹರಡಬಹುದು.

* ವೈರಾಣು ಹೊಂದಿರುವ ಬಾವಲಿಗಳು ಸ್ಪರ್ಶಿಸಿದ ಹಣ್ಣು ಹಂಪಲಿನಿಂದಲೂ ಹರಡುವ ಸಾಧ್ಯತೆ ಇದೆ.

ರೋಗ ಪೀಡಿತ ವ್ಯಕ್ತಿಯನ್ನು ವಿಶೇಷವಾದ ಕೋಣೆಗಳಲ್ಲಿರಿಸಿ ಬೇರೆ ಯಾರಿಗೂ ಸಂಪರ್ಕಕ್ಕೆ ಬರದಂತೆ ತಡೆಯುವುದು ಅತೀ ಅವಶ್ಯಕ. ರೋಗಿಯಿಂದ ವೈದ್ಯರಿಗೆ ಮತ್ತು ದಾದಿಯರಿಗೂ ಈ ರೋಗ ಹರಡುವ ಸಾಧ್ಯತೆ ಇದೆ.

ಚಿಕಿತ್ಸೆ ಹೇಗೆ?

ಎಲ್ಲಾ ಜ್ವರಗಳಿಗೆ ಚಿಕಿತ್ಸೆ ನೀಡಿದಂತೆ, ಜ್ವರವನ್ನು ನಿಯಂತ್ರಿಸಲಾಗುತ್ತದೆ. ಹೆಚ್ಚು ದ್ರವಾಹಾರ ನೀಡಿ ರೋಗಿಗೆ ನಿರ್ಜಲೀಕರಣವಾಗದಂತೆ ತಡೆಯಲಾಗುತ್ತದೆ. ರೋಗ ಬಹುಬೇಗನೆ ಇತರರಿಗೆ ಹರಡುವುದರಿಂದ ರೋಗಿಯನ್ನು ಬೇರೆಯೇ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಯಾರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತದೆ. ವೈದ್ಯರು ಮತ್ತು ದಾದಿಯರು ವಿಶೇಷ ಮತುವರ್ಜಿ ವಹಿಸಬೇಕು ಇಲ್ಲವಾದ್ದಲ್ಲಿ ವೈದ್ಯರಿಗೂ ರೋಗ ಹರಡಬಹುದು. ಕೈಕವಚ, ಮುಖದ ಮಾಸ್ಕ್ ಮತ್ತು ತಲೆಕವಚ ಧರಿಸಿಯೇ ರೋಗಿಯನ್ನು ಸ್ಪರ್ಶಿಸತಕ್ಕದ್ದು. ಆದಷ್ಟು ಬೇಗ ರೋಗವನ್ನು ಪತ್ತೆ ಹಚ್ಚಿ, ರೋಗಿಯನ್ನು ತೀವ್ರ ನಿಗಾಘಟಕದಲ್ಲಿರಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಜೀವಕ್ಕೆ ಬರುವ ಕುತ್ತನ್ನು ತಪ್ಪಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ. ಮುರಲೀ ಮೋಹನ್,ಚೂಂತಾರು

contributor

Similar News