×
Ad

3 ಸಾವಿರ ವಾಣಿಜ್ಯ ವಾಹನ ಚಾಲನಾ ತರಬೇತಿದಾರರ ಪರವಾನಗಿ ರದ್ದತಿಗೆ ಆಮೆರಿಕ ಚಿಂತನೆ!

ಅಮೆರಿಕದಲ್ಲಿನ ಸಾವಿರಾರು ಭಾರತೀಯ ಟ್ರಕ್ ಚಾಲಕರಿಗೆ ಸಂಕಷ್ಟ

Update: 2025-12-02 21:32 IST

ಸಾಂದರ್ಭಿಕ ಚಿತ್ರ | Photo Credit : freepik

ವಾಶಿಂಗ್ಟನ್,ಡಿ.2: ಮುಂದಿನ 30 ದಿನಗಳೊಳಗೆ ವಾಹನ ಚಾಲನಾ ತರಬೇತಿಗೆ ಸಂಬಂಧಿಸಿ ನಿಗದಿತ ಅಗತ್ಯಗಳನ್ನು ಈಡೇರಿಸಲು ಅನುಸರಣಾ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ ಸುಮಾರು 3 ಸಾವಿರ ವಾಣಿಜ್ಯಚಾಲನ ತರಬೇತಿದಾರರ ಪರವಾನಗಿ (ಸಿಡಿಎಲ್) ತರಬೇತಿದಾರರ ಪ್ರಮಾಣಪತ್ರವನ್ನು ರದ್ದುಪಡಿಸಲಾಗುವುದೆಂದು ಅಮೆರಿಕದ ಸಾರಿಗೆ ಇಲಾಖೆಯು ಮಂಗಳವಾರ ಘೋಷಿಸಿದೆ.

ವಾಣಿಜ್ಯ ವಾಹನ ಚಾಲಕರ ಪರವಾನಗಿ ತರಬೇತಿದಾರರ ಪಟ್ಟಿಯಲ್ಲಿ ಸುಮಾರು 16 ಸಾವಿರ ಮಂದಿಯನ್ನು ಗುರುತಿಸಲಾಗಿದೆ. ಅವುಗಳಲ್ಲಿ ಅನುಸರಣಾ ನಿಯಮಗಳನ್ನು ಪಾಲಿಸದವರನ್ನು ಪಟ್ಟಿಯಿಂದ ಕೈಬಿಡಲಾಗುವುದೆಂದು ಅಮೆರಿಕ ತಿಳಿಸಿದೆ.

ಅಮೆರಿಕದ ಸಾರಿಗೆ ಇಲಾಖೆಯ ಈ ನಡೆಯಿಂದಾಗಿ, 1.50 ಲಕ್ಷಕ್ಕೂ ಅಧಿಕ ಪಂಜಾಬಿ ಟ್ರಕ್ ಚಾಲಕರು ತೀವ್ರ ಪರಿಶೋಧನೆಗೊಳಗಾಗುವ ಸಾಧ್ಯತೆಯಿದೆ.

ಇದರ ಜೊತೆಗೆ 4 ಸಾವಿರ ಮಂದಿ ತರಬೇತಿದಾರರು ಅನುಸರಣಾ ನಿಯಮಗಳನ್ನು ಪಾಲಿಸದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರಿಗೂ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.

ಅಮೆರಿಕದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಸಿಯಾನ್ ಡಪ್ಫಿ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ‘ಜೋ ಬೈಡೆನ್ ಹಾಗೂ ಪೀಟ್ ಬ್ಯುಟ್ಟಿಗೀಯೆಗ್ (ಮಾಜಿ ಸಾರಿಗೆ ಕಾರ್ಯದರ್ಶಿ) ಅವರ ಅವಧಿಯಲ್ಲಿ, ಅಪ್ರಾಮಾಣಿಕ ವ್ಯಕ್ತಿಗಳಿಗೆ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡಲು ಸಾಧ್ಯವಾಗಿತ್ತು ಮತ್ತು ಅನರ್ಹ ಚಾಲಕರ ಮಹಾಪೂರವೇ ನಮ್ಮ ರಸ್ತೆಗಳಿಗೆ ಹರಿದುಬಂದಿತ್ತು. ಅವರ ನಿರ್ಲಕ್ಷ್ಯದಿಂದಾಗಿ ರಸ್ತೆಗಳಲ್ಲಿ ಅಮೆರಿಕದ ಪ್ರತಿಯೊಂದು ಕುಟುಂಬವೂ ಅಪಾಯಕ್ಕೆ ಸಿಲುಕಿತ್ತು ಹಾಗೂ ಇಂದಿಗೆ ಅದು ಕೊನೆಯಾಗಿದೆ ಕಳಪೆ ತರಬೇತಿ ಪಡೆದ ಚಾಲಕರು ಸೆಮಿಟ್ರಕ್‌ ಗಳು ಹಾಗೂ ಶಾಲಾ ಬಸ್‌ ಗಳನ್ನು ಚಲಾಯಿಸಲು ಸಾಧ್ಯವಾಗಿರುವಂತಹ ಅಕ್ರಮ ಹಾಗೂ ನಿರ್ಲಕ್ಷ್ಯದ ವ್ಯವಸ್ಥೆಯನ್ನು ಅಧ್ಯಕ್ಷ ಟ್ರಂಪ್ ಅವರ ಆಳ್ವಿಕೆಯಲ್ಲಿ ನಾವು ಕೊನೆಗೊಳಿಸಲಿದ್ದೇವೆ’’ ಎಂದು ಡಫ್ಫಿ ಹೇಳಿದ್ದಾರೆ.

ಟ್ರಂಪ್ ಆಡಳಿತದ ಈ ಕ್ರಮದಿಂದಾಗಿ, ಚಾಲನಾತರಬೇತಿ ಪರವಾನಗಿಯನ್ನು ರದ್ದಾಗಲಿರುವ ಎಲ್ಲಾ ತರಬೇತಿದಾರರು ತಮ್ಮಲ್ಲಿ ತರಬೇತಿ ನಿರತರ ಬಗ್ಗೆ ವಿವರಗಳನ್ನು ಒದಗಿಸಬೇಕಾಗುತ್ತದೆ.

ಅಮೆರಿಕದಲ್ಲಿ ಸುಮಾರು 1.50 ಲಕ್ಷ ಸಿಖ್ಖ್ ಟ್ರಕ್ ಚಾಲಕರಿದ್ದು ಅವರಲ್ಲಿ 40 ಶೇಕಡದಷ್ಟು ಮಂದಿ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ, ಶೇ.20ರಷ್ಟು ಮಂದಿ ರಾಷ್ಟ್ರಾದ್ಯಂತ ಕಾರ್ಯಾಚರಿಸುತ್ತಿದ್ದಾರೆ ಎಂದು ಉತ್ತರ ಅಮೆರಿಕದ ಪಂಜಾಬ್ ಟ್ರಕ್‌ ಚಾಲಕರ ಸಂಘ ಅಂದಾಜಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News