×
Ad

ಬಾಂಗ್ಲಾದ ಗಲಭೆಗೆ ಬೈಡನ್ ಸರಕಾರದಿಂದ ಫಂಡಿಂಗ್: ಹಸೀನಾ ಪುತ್ರ ಆರೋಪ

Update: 2025-11-19 21:31 IST

Photo - ANI

ವರ್ಜೀನಿಯಾ, ನ.19: ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಗೆ ಅಮೆರಿಕಾದ ಬೈಡನ್ ಸರಕಾರ ಕೋಟ್ಯಾಂತರ ಡಾಲರ್ ಖರ್ಚು ಮಾಡಿದೆ. ಆದರೆ ಅಧ್ಯಕ್ಷ ಟ್ರಂಪ್ ಆಡಳಿತದಡಿ ಅಮೆರಿಕಾದ ನಿಲುವು ಖಂಡಿತವಾಗಿಯೂ ಬದಲಾಗಿದೆ ಎಂದು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾರ ಪುತ್ರ ಸಜೀಬ್ ವಾಝೇದ್ ಆರೋಪಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್(ಯುಎಸ್ಎಐಡಿ)ನ ಮೂಲಕ ಬೈಡನ್ ಆಡಳಿತವು ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಗೆ ಕೋಟ್ಯಾಂತರ ಡಾಲರ್ ಖರ್ಚು ಮಾಡಿದೆ ಎಂದು ಸ್ವತಃ ಅಧ್ಯಕ್ಷ ಟ್ರಂಪ್ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು ಎಂದು ಈಗ ಅಮೆರಿಕಾದಲ್ಲಿ ನೆಲೆಸಿರುವ ವಾಝೇದ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಹಸೀನಾ ಸರಕಾರಕ್ಕೆ ಅಮೆರಿಕಾ ಸರಕಾರದಿಂದ ಬೆದರಿಕೆ ಇತ್ತೇ ಎಂಬ ಪ್ರಶ್ನೆಗೆ ವಾಝೇದ್ `ಬೆದರಿಕೆ ಇರಲಿಲ್ಲ. ಆದರೆ ಅಮೆರಿಕಾ 2024ರ ಚುನಾವಣೆಯ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿದ ಏಕೈಕ ರಾಷ್ಟ್ರವಾಗಿತ್ತು' ಎಂದುತ್ತರಿಸಿದ್ದಾರೆ. ಆದರೆ ಈಗ ಟ್ರಂಪ್ ಆಡಳಿತದ ನಿಲುವು ಸಂಪೂರ್ಣ ಬದಲಾಗಿದ್ದು ಹೊಸ ಆಡಳಿತದಡಿ ಬಾಂಗ್ಲಾದಲ್ಲಿ ಭಯೋತ್ಪಾದನೆಯ ಬೆದರಿಕೆ ಹೆಚ್ಚಿರುವ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ ಎಂದ ವಾಝೇದ್, ಬಾಂಗ್ಲಾದ ರಾಜಕೀಯ ಬಿಕ್ಕಟ್ಟಿನ ಸಂದರ್ಭ ಭಾರತದ ಪಾತ್ರವನ್ನು ಶ್ಲಾಘಿಸಿದರು. ಹಸೀನಾರನ್ನು ಬಾಂಗ್ಲಾಕ್ಕೆ ಗಡೀಪಾರು ಮಾಡಬೇಕೆಂಬ ಆಗ್ರಹದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ` ಚುನಾಯಿತವಲ್ಲದ, ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಬಾಂಗ್ಲಾ ಸರಕಾರವು ಹಸೀನಾಗೆ ಮರಣದಂಡನೆ ವಿಧಿಸುವ ಸಂದರ್ಭ ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸಲಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News