×
Ad

ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಗಾಝಾದ ಅತೀ ಕಿರಿಯ ಮಾಧ್ಯಮ ಕಾರ್ಯಕರ್ತೆ ಯಕೀನ್ ಹಮ್ಮಾದ್ ಮೃತ್ಯು

Update: 2025-05-25 13:21 IST

ಯಕೀನ್ ಹಮ್ಮಾದ್ (Photo: X)

ಗಾಝಾ : ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಗಾಝಾದ ಅತೀ ಕಿರಿಯ ಮಾಧ್ಯಮ ಕಾರ್ಯಕರ್ತೆ 11ರ ಹರೆಯದ ಯಕೀನ್ ಹಮ್ಮಾದ್ ಮೃತಪಟ್ಟಿದ್ದಾರೆ.

ಮೇ 23ರಂದು ಗಾಝಾದ ದೇರ್ ಅಲ್-ಬಲಾಹ್ ಪ್ರದೇಶದ ಅಲ್-ಬರಾಕಾ ಎಂಬಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಯಕೀನ್ ಹಮ್ಮದ್ ಮನೆ ನೆಲಸಮವಾಗಿದೆ. ಈ ವೇಳೆ ಯಕೀನ್ ಜೊತೆ ಆಕೆಯ ತಾಯಿ ಮತ್ತು ಇಬ್ಬರು ಸಹೋದರರು ಕೂಡ ಮೃತಪಟ್ಟಿದ್ದಾರೆ.

"ಯಕೀನ್, ವಿಶ್ವ ಚಾಂಪಿಯನ್. ನನ್ನ ಸಹೋದರಿ, ನನ್ನ ಆತ್ಮ, ಹುತಾತ್ಮಳಾದಳು," ಎಂದು ಯಕೀನ್ ನಿಧನ ಬಗ್ಗೆ ಸಹೋದರ ಮಹಮೂದ್ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಯಕೀನ್ ಹಮ್ಮಾದ್ ಯುದ್ಧದಲ್ಲಿ ನಿರಾಶ್ರಿತರಾದ ಕುಟುಂಬಗಳಿಗೆ ಆಹಾರ, ಬಟ್ಟೆ ಮತ್ತು ಆಟಿಕೆಗಳನ್ನು ತಲುಪಿಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು. ಅವಳ ಪುಟ್ಟ ಕೈಗಳು ಹಸಿದವರಿಗೆ ಅನ್ನ, ಚಳಿಯಿಂದ ನಡುಗುವವರಿಗೆ ಬಟ್ಟೆ ನೋವಿನಿಂದ ಕಂಗಾಲಾದ ಮಕ್ಕಳಿಗೆ ಆಟಿಕೆಗಳನ್ನು ನೀಡಿ ಅವರ ಮುಖದಲ್ಲಿ ನಗು ಮೂಡಿಸಲು ಯತ್ನಿಸಿದ್ದವು.

ಯಕೀನ್ ಹಮ್ಮಾದ್ ಕೇವಲ ಸೇವಾ ಕಾರ್ಯಕರ್ತೆಯಾಗಿರಲಿಲ್ಲ. ಗಾಝಾದ ಅತೀ ಕಿರಿಯ ಮಾಧ್ಯಮ ಕಾರ್ಯಕರ್ತೆಯೂ ಆಗಿದ್ದಳು. ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಯಕೀನ್ ಹಮ್ಮಾದ್ ಗಾಝಾದ ನೈಜ ಚಿತ್ರಣವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾಳೆ.

ಗಾಝಾದ ಮಕ್ಕಳ ನೋವು, ಜನರ ಸಂಕಟ, ದಿಗ್ಬಂಧನದ ಕ್ರೌರ್ಯವನ್ನು ತನ್ನ ವೀಡಿಯೋಗಳ ಮೂಲಕ ಯಕೀನ್ ಹಮ್ಮಾದ್ ಜಗತ್ತಿಗೆ ತಿಳಿಸಿದ್ದಾಳೆ. ಅನಾಥ ಮಕ್ಕಳಿಗಾಗಿ ದೇಣಿಗೆ ಸಂಗ್ರಹಿಸುವುದು, ನಿರಾಶ್ರಿತರ ಕಷ್ಟಗಳನ್ನು ತೋಡಿಕೊಳ್ಳುವುದು, ಮಕ್ಕಳೊಂದಿಗೆ ನಕ್ಕು ನಲಿಯುವ ಕ್ಷಣಗಳನ್ನು ಹಂಚಿಕೊಳ್ಳುವುದು. ಇವೆಲ್ಲವೂ ಅವಳ ಡಿಜಿಟಲ್ ಜಗತ್ತಿನ ಭಾಗವಾಗಿದ್ದವು.

ಒಂದು ವೀಡಿಯೋದಲ್ಲಿ, ಅಡುಗೆ ಅನಿಲ ಸಿಗದಿದ್ದರೂ, ಒಂದು ವಿಶಿಷ್ಟವಾದ ಒಲೆಯನ್ನು ಮಾಡಿ ಅಡುಗೆ ಮಾಡುವ ದೃಶ್ಯವಿದೆ. ʼಗಾಝಾದಲ್ಲಿ ಯಾವುದೂ ಅಸಾಧ್ಯವಲ್ಲʼ ಎಂದು ಯಕೀನ್ ಹಮ್ಮಾದ್ ಹೇಳಿದ ಮಾತು ಅಲ್ಲಿನ ಜನರ ಅಚಲ ಸ್ಥೈರ್ಯಕ್ಕೆ ಸಾಕ್ಷಿಯಾಗಿತ್ತು.

ಇನ್ನೊಂದು ಪೋಸ್ಟ್‌ನಲ್ಲಿ, "ಹಸಿವು, ದಿಗ್ಬಂಧನ, ಮತ್ತು ನರಮೇಧದ ನಡುವೆಯೂ ನಾವು ಖುರಾನ್ ಮತ್ತು ಶಿಕ್ಷಣವನ್ನು ದೃಢವಾಗಿ ಹಿಡಿದಿದ್ದೇವೆ - ಖಾಲಿ ಹೊಟ್ಟೆ ಮತ್ತು ನಂಬಿಕೆಯುಳ್ಳ ಹೃದಯಗಳೊಂದಿಗೆ," ಎಂದು ಬರೆದಿದ್ದಳು. ಇದು ಅವಳ ನಂಬಿಕೆ, ಛಲ ಮತ್ತು ಹೋರಾಟದ ಮನೋಭಾವವನ್ನು ತೋರಿಸಿತ್ತು.

ಯಕೀನ್ ಹಮ್ಮಾದ್ 'ಓಯೆನಾ ಕಲೆಕ್ಟಿವ್' ಎಂಬ ಸ್ಥಳೀಯ ಸೇವಾ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಳು. ಅವಳ ಧ್ವನಿ ಗಾಝಾದ ಮಕ್ಕಳ ಹಾಗೂ ಯುವ ಜನರ ಧ್ವನಿಯಾಯಿತು.

ಯಕೀನ್ ಹಮ್ಮಾದ್ ಧೈರ್ಯ, ಕರುಣೆ, ಹೋರಾಟದ ಮನೋಭಾವ ಸಾವಿರಾರು ಜನರಿಗೆ ಸ್ಫೂರ್ತಿಯಾಯಿತು. ಅವಳು ಗಾಝಾದ ಮಕ್ಕಳ ಅಸಾಧಾರಣ ಧೈರ್ಯ, ಸೋಲೊಪ್ಪದ ಮನೋಭಾವ ಹಾಗೂ ಗಟ್ಟಿ ಮನಸ್ಸಿನ ಸಂಕೇತವಾಗಿದ್ದಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News