×
Ad

ಮಾಲ್ದೀವ್ಸ್ ಗೆ ಅಗತ್ಯವಸ್ತುಗಳ ಸರಬರಾಜು ಹೆಚ್ಚಿಸಲು ಭಾರತ ಸಮ್ಮತಿ

Update: 2024-04-06 23:09 IST

Photo : NDTV

ಮಾಲೆ: ಮಾಲ್ದೀವ್ಸ್ ಗೆ ಕೆಲವು ಅಗತ್ಯ ವಸ್ತುಗಳ ರಫ್ತು ಪ್ರಕ್ರಿಯೆಯನ್ನು ನವೀಕರಿಸಲು ಸಮ್ಮತಿಸಿದ ಭಾರತದ ನಿಲುವು ದೀರ್ಘಕಾಲದ ದ್ವಿಪಕ್ಷೀಯ ಸ್ನೇಹ ಮತ್ತು ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ಮಾಲ್ದೀವ್ಸ್ ವಿದೇಶಾಂಗ ಸಚಿವ ಮೂಸಾ ಝಮೀರ್ ಶನಿವಾರ ಹೇಳಿದ್ದಾರೆ.

ಮಾಲ್ದೀವ್ಸ್ ಸರಕಾರದ ಕೋರಿಕೆಯ ಮೇರೆಗೆ 2024-25ನೇ ವರ್ಷಕ್ಕೆ ಕೆಲವು ಅಗತ್ಯ ವಸ್ತುಗಳ ರಫ್ತು ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಲಾಗಿದ್ದು ಇದನ್ನು ವಿಶಿಷ್ಟ ದ್ವಿಪಕ್ಷೀಯ ಕಾರ್ಯವಿಧಾನದ ಅಡಿಯಲ್ಲಿ ಮಾಡಲಾಗುತ್ತದೆ. ಅದರಂತೆ ಈ ಪ್ರತಿಯೊಂದು ವಸ್ತುಗಳ ಕೋಟಾವನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ. 1981ರಲ್ಲಿ ಜಾರಿಗೆ ಬಂದಂದಿನಿಂದ ಈ ಅನುಮೋದಿಸಲ್ಪಟ್ಟ ಪ್ರಮಾಣವು ಅತ್ಯಧಿಕವಾಗಿದೆ ಎಂದು ಮಾಲ್ದೀವ್ಸ್‍ನಲ್ಲಿನ ಭಾರತದ ಹೈಕಮಿಷನ್ ಶುಕ್ರವಾರ ಹೇಳಿದೆ.

ಅಗತ್ಯವಸ್ತುಗಳ ರಫ್ತು ಪ್ರಕ್ರಿಯೆ ಮುಂದುವರಿಸುವಂತೆ ಮಾಲ್ದೀವ್ಸ್ ಮಾಡಿದ್ದ ಕೋರಿಕೆಗೆ ಭಾರತ ತಕ್ಷಣ ಸ್ಪಂದಿಸಿದ್ದು `ನೆರೆಹೊರೆ ಮೊದಲು' ಎಂಬ ಧೋರಣೆಯಂತೆ ಮಾಲ್ದೀವ್ಸ್‍ಗೆ ನೆರವು ಮುಂದುವರಿಸಲಾಗುವುದು ಎಂದು ಘೋಷಿಸಿತ್ತು.

`2024-25ರ ವರ್ಷದಲ್ಲಿ ಭಾರತದಿಂದ ಅಗತ್ಯ ವಸ್ತುಗಳ ರಫ್ತು ಕೋಟಾವನ್ನು ನವೀಕರಿಸಿದ್ದಕ್ಕಾಗಿ ಭಾರತ ಸರಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗೆ ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ' ಎಂದು ಮೂಸಾ ಝಮೀರ್ ಟ್ವೀಟ್(ಎಕ್ಸ್) ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News