ಯೆಮನ್‍ನ ಮಾರಿಬ್ ಪ್ರದೇಶದ ಮೇಲೆ ಹೌದಿಗಳ ದಾಳಿ : 8 ಯೋಧರ ಸಹಿತ ಕನಿಷ್ಠ10 ಜನರು ಮೃತ್ಯು
Photo Credit : aljazeera.com
ಸನಾ, ಆ.8: ಯೆಮನ್‍ನ ತೈಲ ಸಮೃದ್ಧ ಪ್ರದೇಶವಾದ ಮಾರಿಬ್‍ನ ಮೇಲಿನ ದಾಳಿಯನ್ನು ಹೌದಿ ಬಂಡುಕೋರರು ತೀವ್ರಗೊಳಿಸಿದ್ದು, ಶುಕ್ರವಾರ ನಡೆದ ದಾಳಿಗಳಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಎಂದು ಸರಕಾರ ಮತ್ತು ಸೇನಾ ಮೂಲಗಳು ತಿಳಿಸಿವೆ.
ಹೌದಿಗಳು ಹಾಗೂ ಯೆಮನ್‍ನ ಸೌದಿ ಬೆಂಬಲಿತ ಸರ್ಕಾರದ ನಡುವೆ 2022ರಲ್ಲಿ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವು ಕಳೆದ ತಿಂಗಳು ಮುರಿದುಬಿದ್ದಿತ್ತು. ಇದೀಗ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿರುವುದು ಅರೇಬಿಯನ್ ಪರ್ಯಾಯ ದ್ವೀಪದ ಅತ್ಯಂತ ಬಡ ದೇಶವಾದ ಯೆಮನ್‍ನಲ್ಲಿ ಮತ್ತೆ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ.
ಮಾರಿಬ್ ಪ್ರಾಂತದಲ್ಲಿ ನಡೆದ ದಾಳಿಯಲ್ಲಿ ಸರ್ಕಾರಿ ಪಡೆಗಳ ಎಂಟು ಸದಸ್ಯರು ಮೃತಪಟ್ಟಿದ್ದು , ಇತರ 12 ಜನರು ಗಾಯಗೊಂಡಿದ್ದಾರೆ. ಮಾರಿಬ್ ನಗರದ ವಸತಿ ಪ್ರದೇಶಗಳು ಮತ್ತು ನಿರಾಶ್ರಿತರ ಶಿಬಿರಗಳ ಮೇಲೆ ನಡೆದ ಶೆಲ್ ದಾಳಿಯಲ್ಲಿ ಕನಿಷ್ಠ ಇಬ್ಬರು ನಾಗರಿಕರು ಮೃತಪಟ್ಟು 14 ಜನರು ಗಾಯಗೊಂಡಿದ್ದಾರೆ. ಹೌದಿಗಳು 10 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಏಳು ಆತ್ಮಹುತಿ ಡ್ರೋನ್‍ಗಳನ್ನು ಪ್ರಯೋಗಿಸಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾರಿಬ್ ಪ್ರಾಂತದ ಸಾಹ್ನ್ ಅಲ್-ಜಿನ್ ಸೇನಾ ಶಿಬಿರದ ಮೇಲಿನ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌದಿ ಬಂಡುಕೋರರು ವಹಿಸಿಕೊಂಡಿದ್ದಾರೆ.
`ಸೌದಿ ಶತ್ರುಗಳು ತಮ್ಮ ಪಡೆಗಳನ್ನು ಸಂಘಟಿಸಲು ಮತ್ತು ಪ್ರಚೋದಿಸಲು ಮುಂದುವರಿದಿದ್ದರು. ಸಾಹ್ನ್ ಅಲ್-ಜಿನ್ ಶಿಬಿರದಲ್ಲಿದ್ದ ಈ ಪಡೆಗಳು, ಅವರ ಶಸ್ತ್ರಾಸ್ತ್ರಗಳು, ವಾಹನಗಳು ಮತ್ತು ಮಿಲಿಟರಿ ಉಪಕರಣಗಳ ಮೇಲೆ ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳು ಮತ್ತು ಡ್ರೋನ್‍ಗಳ ಮೂಲಕ ದಾಳಿ ನಡೆಸಲಾಗಿದೆ' ಎಂದು ಹೌದಿ ವಕ್ತಾರ ಯಾಹ್ಯಾ ಸಾರೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೌದಿಗಳ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು 2015 ರಿಂದ ಯೆಮನ್ ಸರಕಾರಕ್ಕೆ ಬೆಂಬಲ ನೀಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು ತಿಳಿಸಿದೆ.
ಹೌದಿ ದಾಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಂಡನೆ
ಸೌದಿ ಅರೇಬಿಯಾ ಹಾಗೂ ವಾಣಿಜ್ಯ ಹಡಗುಗಳ ಮೇಲಿನ ಕ್ಷಿಪಣಿ ದಾಳಿಗಳು, ಮತ್ತು ಸನಾ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊದೈಡಾ ವಿಮಾನ ನಿಲ್ದಾಣಗಳಲ್ಲಿ ಅನಧಿಕೃತವಾಗಿ ವಿಮಾನಗಳನ್ನು ಇಳಿಸುವ ಮೂಲಕ ಹೌದಿಗಳು ಯೆಮನ್‍ನಲ್ಲಿನ ಶಾಂತಿ ಪ್ರಯತ್ನಗಳನ್ನು ಹಾಳುಮಾಡುವ ಮತ್ತು ಪ್ರಾದೇಶಿಕ ಭದ್ರತೆಗೆ ಬೆದರಿಕೆ ಒಡ್ಡುವ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಖಂಡಿಸಿದೆ.
ಜುಲೈ 3ರಂದು ಸನಾ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಜುಲೈ 13ರಂದು ಹೊದೈಡಾ ವಿಮಾನ ನಿಲ್ದಾಣದಲ್ಲಿ ಇರಾನ್‍ನ ವಿಮಾನಗಳು ಅನಧಿಕೃತವಾಗಿ ಇಳಿದಿರುವುದನ್ನು ಭದ್ರತಾ ಮಂಡಳಿ ಖಂಡಿಸಿದ್ದು, ಯೆಮನ್ ಸರಕಾರದಿಂದ ಯಾವುದೇ ಅನುಮತಿ ಅಥವಾ ಮಂಜೂರಾತಿ ಇಲ್ಲದೆ ಅಂತರ್‍ರಾಷ್ಟ್ರೀಯ ನಾಗರಿಕ ವಿಮಾನಯಾನ ನಿಯಮಗಳನ್ನು ಉಲ್ಲಂಘಿಸಿ ಇವು ನಡೆದಿವೆ ಎಂದು ಹೇಳಿದೆ.
ಜುಲೈ 13 ರಿಂದ ಸೌದಿ ಅರೇಬಿಯಾದ ವಿರುದ್ಧ ಮತ್ತು ಜುಲೈ 22 ರಿಂದ ವಾಣಿಜ್ಯ ಹಡಗುಗಳ ವಿರುದ್ಧ ಹೌದಿಗಳು ನಡೆಸಿದ ಕ್ಷಿಪಣಿ ದಾಳಿಗಳನ್ನು ಮಂಡಳಿಯ ಸದಸ್ಯರು ಖಂಡಿಸಿದ್ದು ಯೆಮನ್‍ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತಮ್ಮ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಯೆಮನ್ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಎಲ್ಲಾ ವಿಮಾನಗಳು ಯೆಮನ್ ಸರ್ಕಾರದೊಂದಿಗೆ ಸಂಯೋಜಿತವಾಗಿರಬೇಕು ಮತ್ತು ಪೂರ್ವಾನ್ವಯ ಅನುಮತಿಯನ್ನು ಪಡೆಯಬೇಕು ಎಂದು ಒತ್ತಿ ಹೇಳಿದ್ದಾರೆ.