ಸೌದಿ ಅರೇಬಿಯಾ, ಪಾಕಿಸ್ತಾನ , ಟರ್ಕಿ ದೇಶಗಳ ನಡುವೆ ತ್ರಿಪಕ್ಷೀಯ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ : ಇರಾನ್ ನಿಂದ ತೀಕ್ಷ್ಣ ಪ್ರತಿಕ್ರಿಯೆ
Photo: x.com/business
ಮಕ್ಕಾ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆ ಮತ್ತು ಸಂಘರ್ಷಗಳ ನಡುವೆ ಭದ್ರತಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ತ್ರಿಪಕ್ಷೀಯ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಬಗ್ಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು , ಪ್ರಾದೇಶಿಕ ಭದ್ರತೆಯನ್ನು ಸಾಧಿಸಲು ಕೇವಲ ಕಾಗದದ ಒಪ್ಪಂದಗಳು ಸಾಕಾಗುವುದಿಲ್ಲ ಎಂದು ಹೇಳಿದೆ.
ಸೌದಿ ಅಧಿಕೃತ ಸುದ್ದಿ ಸಂಸ್ಥೆ ಮತ್ತು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಈ ಮೂರು ದೇಶಗಳು ಮಕ್ಕಾ ಜಂಟಿ ರಕ್ಷಣಾ ಒಪ್ಪಂದ ಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿವೆ.
ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯದ ನಿರ್ಮಾಣಕ್ಕಾಗಿ ತಮ್ಮ ಸಾಮೂಹಿಕ ಭದ್ರತೆಯನ್ನು ಬಲಪಡಿಸಲು ಈ ಒಪ್ಪಂದ ಮಾಡಲಾಗಿದೆ. ಇದರ ಮೂಲಕ ಈ ವಲಯ ಮತ್ತು ಇತರ ಭಾಗಗಳಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ತಾವು ಬದ್ಧವಾಗಿರುವುದಾಗಿ ಮೂರು ದೇಶಗಳು ತಿಳಿಸಿವೆ.
“ಮೈತ್ರಿಕೂಟದ ಯಾವುದೇ ಸದಸ್ಯ ರಾಷ್ಟ್ರದ ಮೇಲೆ ದಾಳಿ ನಡೆದರೆ ಅದನ್ನು ಎಲ್ಲಾ ರಾಷ್ಟ್ರಗಳ ಮೇಲಿನ ದಾಳಿಯೆಂದು ಪರಿಗಣಿಸಲಾಗುವುದು. ಇದು ಸಾಮೂಹಿಕ ಪ್ರತಿಬಂಧಕಶಕ್ತಿಯನ್ನು ಬಲಪಡಿಸುವ ಉದ್ದೇಶ ಹೊಂದಿದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿದ ಕೆಲವೇ ದಿನಗಳಲ್ಲಿ ಈ ಒಪ್ಪಂದ ಘೋಷಣೆಯಾಗಿದೆ. ಟರ್ಕಿಯ ಅಧ್ಯಕ್ಷ ರೆಸೆಪ್ ತಯಿಪ್ ಎರ್ಡೋಗನ್ ಕೂಡ ಶುಕ್ರವಾರ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿ, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರು.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದಾಗಿನಿಂದ , ಸೌದಿ ಅರೇಬಿಯಾವು ಇರಾನ್ನಿಂದ ಹಾಗೂ ಯೆಮನ್ ಹೌತಿ ಬಂಡುಕೋರರಿಂದ ನಿರಂತರವಾಗಿ ದಾಳಿಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಈ ಒಪ್ಪಂದವು ಮಹತ್ವ ಪಡೆದುಕೊಂಡಿದೆ.
3 ದೇಶಗಳ ಪ್ರತಿಕ್ರಿಯೆಗಳು
ಸೌದಿ ಅರೇಬಿಯಾದ ಸಾರ್ವಜನಿಕ ರಾಜತಾಂತ್ರಿಕತೆಯ ಉಪಸಚಿವ ರಾಯಿದ್ ಕ್ರಿಮ್ಲಿ ಈ ಬಗ್ಗೆ ಎಕ್ಸ್ ನಲ್ಲಿ ಬರೆದಿದ್ದು , “ಈ ಒಪ್ಪಂದವು ಯಾವುದೇ ದೇಶಕ್ಕೆ ಬೆದರಿಕೆಯಲ್ಲ . ಯಾವುದೇ ಮಿಲಿಟರಿ ಅಥವಾ ಧರ್ಮೀಯ ಬಣವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿಲ್ಲ. ಪರಮಾಣು ಮಹತ್ವಾಕಾಂಕ್ಷೆಗಳಿಗೆ ಅಥವಾ ಶಸ್ತ್ರಾಸ್ತ್ರ ಸ್ಪರ್ಧೆಗೆ ಸಂಬಂಧಿಸಿದ್ದಲ್ಲ. ಬದಲಾಗಿ ಸ್ವಾವಲಂಬಿ ಸಾಮರ್ಥ್ಯಗಳನ್ನು ನಿರ್ಮಿಸುವುದಾಗಿದೆ" ಎಂದು ತಿಳಿಸಿದ್ದಾರೆ.
ಟರ್ಕಿ ಅಧ್ಯಕ್ಷ ರೆಸೆಪ್ ತಯಿಪ್ ಎರ್ದೋಗಾನ್ ಪ್ರತಿಕ್ರಿಯಿಸಿ, "ಸಾಮೂಹಿಕ ಪ್ರತಿಬಂಧಕತೆಯ ಆಧಾರದ ಮೇಲೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಂತಾರಾಷ್ಟ್ರೀಯ ಕಾನೂನಿನ ಗೌರವದ ಆಧಾರದ ಮೇಲೆ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷಗಳು ಹಾಗೂ ಬಿಕ್ಕಟ್ಟುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಟರ್ಕಿ ತನ್ನ ತತ್ವಬದ್ಧ ನಿಲುವನ್ನು ಮುಂದುವರಿಸಲಿದೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ತಮ್ಮ ಹೇಳಿಕೆಯಲ್ಲಿ , ಈ ಜಂಟಿ ಒಪ್ಪಂದವು ಐತಿಹಾಸಿಕ ಹೆಜ್ಜೆಯಾಗಿದೆ. ಇದು ನಮ್ಮ ತಾಯ್ನಾಡಿನ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಹಾಗೂ ನಮ್ಮ ಪ್ರದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಇರಾನ್ ಪ್ರತಿಕ್ರಿಯೆ
ಈ ಒಪ್ಪಂದದ ಬಗ್ಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇರಾನ್ ಸಂಸತ್ ಸದಸ್ಯ ಇಬ್ರಾಹಿಂ ರಝಾಯಿ ತಮ್ಮ ಹೇಳಿಕೆಯಲ್ಲಿ , ಪ್ರಾದೇಶಿಕ ಭದ್ರತೆಯನ್ನು ಸಾಧಿಸಲು ಕೇವಲ ಕಾಗದದ ಒಪ್ಪಂದಗಳು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
"ಟರ್ಕಿ ಮತ್ತು ಪಾಕಿಸ್ತಾನದೊಂದಿಗಿನ ಕಾಗದದ ಒಪ್ಪಂದವು ಸೌದಿಗೆ ಭದ್ರತೆಯನ್ನು ತರುವುದಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಅಮೆರಿಕದೊಂದಿಗೆ ವರ್ಷಗಟ್ಟಲೆ ನಡೆಸಿದ ಏಕಪಕ್ಷೀಯ ಒಡನಾಟವು ಅವರಿಗೆ ಹೇಗೆ ಭದ್ರತೆಯನ್ನು ತಂದುಕೊಡಲಿಲ್ಲವೋ, ಹಾಗೆಯೇ ಇದು ಕೂಡ ಆಗಲಿದೆ. ನಿಮ್ಮ ನೀತಿಗಳನ್ನು ಬದಲಾಯಿಸಿದರೆ ಇತರರ ಜೊತೆ ಭದ್ರತೆಗಾಗಿ ಒಪ್ಪಂದ ಮಾಡಬಾಕಾದ ಪರಿಸ್ಥಿತಿ ಉದ್ಭವಿಸುವುದಿಲ್ಲ “ ಎಂದು ಅವರು ತಿಳಿಸಿದ್ದಾರೆ.