×
Ad

ಇರಾನ್ ವಿರುದ್ಧ ಮಿಲಿಟರಿ ಕ್ರಮ: ಕಾಂಗ್ರೆಸ್ ಅನುಮೋದನೆ ಕಡ್ಡಾಯಗೊಳಿಸುವ ನಿರ್ಣಯ ತಡೆಹಿಡಿದ ಯುಎಸ್ ಸೆನೆಟ್

Update: 2026-03-05 04:31 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ವಾಷಿಂಗ್ಟನ್, ಮಾ.5: ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಮೊದಲು ಕಾಂಗ್ರೆಸ್‌ ನ ಸ್ಪಷ್ಟ ಅನುಮೋದನೆ ಕಡ್ಡಾಯವಾಗಬೇಕು ಎಂದು ಸೂಚಿಸಿದ್ದ ನಿರ್ಣಯವನ್ನು ಅಮೆರಿಕದ ಸೆನೆಟ್ ತಡೆಹಿಡಿದಿದೆ ಎಂದು Aljazeera ವರದಿ ಮಾಡಿದೆ.

ಅಮೆರಿಕದ ಸಶಸ್ತ್ರ ಪಡೆಗಳನ್ನು ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಗಳಲ್ಲಿ ಬಳಸುವ ಅಧಿಕಾರವನ್ನು ಅಧ್ಯಕ್ಷರಿಂದ ನಿಯಂತ್ರಿಸಿ ಕಾಂಗ್ರೆಸ್‌ ನ ಮೇಲ್ವಿಚಾರಣೆಯಡಿ ತರಲು ಈ ನಿರ್ಣಯವನ್ನು ಮಂಡಿಸಲಾಗಿತ್ತು. ಆದರೆ ಸೆನೆಟ್‌ ನಲ್ಲಿ ನಡೆದ ಮತದಾನದಲ್ಲಿ ಇದಕ್ಕೆ ಅಗತ್ಯ ಬೆಂಬಲ ದೊರಕಲಿಲ್ಲ.

ಮತದಾನದಲ್ಲಿ ರಿಪಬ್ಲಿಕನ್ ಪಕ್ಷದ ಸೆನೆಟರ್‌ ಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 47–53 ಮತಗಳ ಅಂತರದಲ್ಲಿ ನಿರ್ಣಯ ತಿರಸ್ಕೃತವಾಯಿತು. ಮತದಾನ ಬಹುತೇಕವಾಗಿ ಪಕ್ಷಗಳ ರಾಜಕೀಯ ನಿಲುವಿಗೆ ಅನುಗುಣವಾಗಿಯೇ ನಡೆಯಿತು.

ಈ ಪ್ರಸ್ತಾವನೆಯ ಪ್ರಕಾರ, ಕಾಂಗ್ರೆಸ್ ಅನುಮೋದನೆ ನೀಡದ ಹೊರತು ಇರಾನ್ ವಿರುದ್ಧ ನಡೆಯುವ ಮಿಲಿಟರಿ ಕಾರ್ಯಾಚರಣೆಗಳಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರ್ದೇಶಿಸುವ ವಿಧಾನವೂ ಸೇರಿಸಲಾಗಿತ್ತು. ಅಧ್ಯಕ್ಷರ ಮಿಲಿಟರಿ ಅಧಿಕಾರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮವನ್ನು ಮುಂದಿರಿಸಲಾಗಿತ್ತು.

ಆದರೆ ಸೆನೆಟ್‌ ನಲ್ಲಿ ನಿರ್ಣಯ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಅದು ಜಾರಿಗೆ ಬರಲಿಲ್ಲ. ಇದರಿಂದ ಇರಾನ್ ಕುರಿತ ಮಿಲಿಟರಿ ಕ್ರಮಗಳ ವಿಷಯದಲ್ಲಿ ಅಧ್ಯಕ್ಷರಿಗೆ ಇರುವ ಅಧಿಕಾರ ಯಥಾಸ್ಥಿತಿಯಲ್ಲೇ ಮುಂದುವರಿದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News