×
Ad

`ನೆರವು' ಹೊತ್ತ ಗ್ರೆಟಾ ಥನ್‍ಬರ್ಗ್ ನೌಕೆ ಗಾಝಾ ಪ್ರವೇಶಿಸಲು ಬಿಡುವುದಿಲ್ಲ: ಇಸ್ರೇಲ್

Update: 2025-06-05 20:24 IST

ಹಡಗಿನಲ್ಲಿ ಗಾಝಾಕ್ಕೆ ಹೊರಟ ಪರಿಸರವಾದಿ ಕಾರ್ಯಕರ್ತೆ ಗ್ರೆಟಾ ಥನ್‌ ಬರ್ಗ್‌ | Photo: instagram.com/gretathunberg



ಟೆಲ್ ಅವೀವ್: ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‍ಬರ್ಗ್ ಸೇರಿದಂತೆ ಫೆಲೆಸ್ತೀನ್ ಪರವಿರುವ 12 ಅಂತರಾಷ್ಟ್ರೀಯ ಕಾರ್ಯಕರ್ತರು ಹಾಗೂ ನೆರವನ್ನು ಹೊತ್ತ `ಫ್ರೀಡಂ ಫ್ಲೊಟಿಲ್ಲಾ' ಗಾಝಾದ ಬಳಿ ಬರಲು ಅಥವಾ ಗಾಝಾದಲ್ಲಿ ತಂಗಲು ಬಿಡುವುದಿಲ್ಲ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.

ಸಿಸಿಲಿಯಿಂದ ಜೂನ್ 1ರಂದು ಮಕ್ಕಳಿಗೆ ಅಗತ್ಯವಿರುವ ವಸ್ತುಗಳು, ಡಯಾಪರ್‌ ಗಳು, ಹಿಟ್ಟು, ಅಕ್ಕಿ, ವಾಟರ್‍ಫಿಲ್ಟರ್‌ ಗಳು, ನೈರ್ಮಲ್ಯ ಉತ್ಪನ್ನಗಳು ಹಾಗೂ ವೈದ್ಯಕೀಯ ಸಲಕರಣೆಗಳ ಸಹಿತ ಪ್ರಯಾಣ ಆರಂಭಿಸಿರುವ ನೌಕೆಯು ಜೂನ್ 7ರಂದು ಗಾಝಾ ತಲುಪುವ ನಿರೀಕ್ಷೆಯಿದೆ. ಪ್ರಯಾಣ ಆರಂಭಕ್ಕೂ ಮುನ್ನ ವರದಿಗಾರರ ಜೊತೆ ಮಾತನಾಡಿದ ಗ್ರೆಟಾ ಥನ್‍ಬರ್ಗ್ ` ಈ ಕಾರ್ಯಕ್ರಮ ತುಂಬಾ ಅಪಾಯಕಾರಿಯಾಗಿರಬಹುದು. ಆದರೆ ಗಾಝಾದಲ್ಲಿ ಇಸ್ರೇಲ್‍ ನ `ಅಕ್ರಮ ಮುತ್ತಿಗೆ' ಹಾಗೂ ಹೆಚ್ಚುತ್ತಿರುವ ಯುದ್ಧಾಪರಾಧಗಳ ಸವಾಲನ್ನು ಎದುರಿಸಿ ಅಗತ್ಯವಿರುವ ಸಹಾಯವನ್ನು ಗಾಝಾ ನಿವಾಸಿಗಳಿಗೆ ಒದಗಿಸುವ ಶಾಂತಿಯುತ ಪ್ರಯತ್ನ ಇದಾಗಿದೆ' ಎಂದು ಹೇಳಿದರು.

`ಈ ಪ್ರಕರಣ ಎದುರಿಸಲೂ ನಾವು ಸನ್ನದ್ಧರಾಗಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ನಾವು ಸಾಕಷ್ಟು ಅನುಭವ ಗಳಿಸಿದ್ದೇವೆ. ಸಮುದ್ರ ಮಾರ್ಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಾಚರಿಸಲು ಐಡಿಎಫ್ ಸಿದ್ಧವಾಗಿದೆ. ಗಾಝಾದಲ್ಲಿ ನೌಕೆ ತಂಗಲು ಅವಕಾಶ ಮಾಡಿಕೊಟ್ಟರೆ ಅಂತರಾಷ್ಟ್ರೀಯ ಕಾರ್ಯಕರ್ತರು ಗಾಝಾದಲ್ಲಿ ಸಿಲುಕಿಕೊಳ್ಳುತ್ತಾರೆ' ಎಂದು ಐಡಿಎಫ್ ವಕ್ತಾರ ಬ್ರಿ|ಜ| ಎಫೀ ಡೆರ್ಫಿನ್‍ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News