×
Ad

ನೇಟೋ ಗುರಿಯನ್ನು ಕೈಬಿಡಲು ಉಕ್ರೇನ್ ಸಿದ್ಧ: ಝೆಲೆನ್‍ಸ್ಕಿ

Update: 2025-12-15 23:45 IST

photo: AFP

ಬರ್ಲಿನ್, ಡಿ.15: ರಶ್ಯದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕಾದ ಪ್ರತಿನಿಧಿಯೊಂದಿಗೆ ಬರ್ಲಿನ್‍ನಲ್ಲಿ ಐದು ಗಂಟೆ ಮಾತುಕತೆ ನಡೆಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ನೇಟೋ ಮಿಲಿಟರಿ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಆಕಾಂಕ್ಷೆಗಳನ್ನು ಕೈಬಿಡಲು ಸಿದ್ಧ ಎಂದು ಹೇಳಿರುವುದಾಗಿ ವರದಿಯಾಗಿದೆ.

`ಪಾಶ್ಚಿಮಾತ್ಯರು ಭದ್ರತೆಯ ಖಾತರಿ ನೀಡಿದರೆ ನೇಟೋಗೆ ಸೇರ್ಪಡೆಯಾಗುವ ಗುರಿಯನ್ನು ಉಕ್ರೇನ್ ಕೈಬಿಡಲು ಸಿದ್ಧ. ಆರಂಭದಿಂದಲೂ ನೇಟೋಗೆ ಸೇರ್ಪಡೆಗೊಳ್ಳುವುದು ಉಕ್ರೇನ್‍ ನ ಆಶಯವಾಗಿತ್ತು. ಇದು ನಿಜವಾದ ಭದ್ರತಾ ಖಾತರಿಯಾಗಿದೆ. ಅಮೆರಿಕ ಮತ್ತು ಯುರೋಪ್‍ನ ಕೆಲವು ಪಾಲುದಾರರು ಈ ನಿಟ್ಟಿನಲ್ಲಿ ಬೆಂಬಲ ನೀಡಲಿಲ್ಲ. ಆದ್ದರಿಂದ ನಮಗೆ ಅಮೆರಿಕಾದಿಂದ ಆರ್ಟಿಕಲ್-5ರ ರೀತಿಯ ಖಾತರಿ ಮತ್ತು ಯುರೋಪಿಯನ್ ಮಿತ್ರರಿಂದ, ಕೆನಡಾ, ಜಪಾನ್ ಮತ್ತಿತರ ದೇಶಗಳಿಂದ ಭದ್ರತೆಯ ಖಾತರಿ ದೊರಕುವುದು ರಶ್ಯದ ಮತ್ತೊಂದು ಆಕ್ರಮಣವನ್ನು ತಡೆಯಲು ಅವಕಾಶ ನೀಡುತ್ತದೆ. ಭದ್ರತಾ ಖಾತರಿಗೆ ಕಾನೂನಿನ ಬದ್ಧತೆಯಿರಬೇಕು. ಆಗ ನಾವು ಹೊಂದಾಣಿಕೆಗೆ ಸಿದ್ಧವಿದ್ದೇವೆ' ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ.

ಝೆಲೆನ್‍ಸ್ಕಿಯ ಈ ಹೇಳಿಕೆ ಉಕ್ರೇನ್ ನಿಲುವಿನಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ. ರಶ್ಯದ ದಾಳಿಗಳಿಂದ ರಕ್ಷಣೆ ಪಡೆಯಲು ನೇಟೋಗೆ ಸೇರ್ಪಡೆಗೊಳ್ಳುವುದಾಗಿ ಪ್ರತಿಪಾದಿಸುತ್ತಾ ಬಂದಿರುವ ಉಕ್ರೇನ್, ಈ ಆಕಾಂಕ್ಷೆಯನ್ನು ತನ್ನ ಸಂವಿಧಾನದಲ್ಲೂ ಸೇರ್ಪಡೆಗೊಳಿಸಿದೆ. ಯುದ್ಧ ಕೊನೆಗೊಳಿಸಲು ಟ್ರಂಪ್ ಪ್ರಸ್ತಾಪಿಸಿರುವ 20 ಅಂಶದ ಶಾಂತಿ ಯೋಜನೆಯ ಮತ್ತೊಂದು ಅಂಶವಾದ `ಭೂಪ್ರದೇಶವನ್ನು ರಶ್ಯಕ್ಕೆ ಬಿಟ್ಟುಕೊಡಲು' ಉಕ್ರೇನ್ ಇದುವರೆಗೆ ಸಮ್ಮತಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News