ಹಮಾಸ್ ವಶದಲ್ಲಿದ್ದ ನೇಪಾಳಿ ವಿದ್ಯಾರ್ಥಿ ಸಾವು ಧೃಢ
ಮೃತದೇಹ ಇಸ್ರೇಲ್‌ಗೆ ಹಸ್ತಾಂತರ
Photo Credit : indiatoday.in
ಟೆಲ್‌ಅವಿವ್: ನೇಪಾಳಿ ಪ್ರಜೆ ಬಿಪಿನ್ ಜೋಶಿ ಸೇರಿದಂತೆ ನಾಲ್ವರು ಒತ್ತೆಯಾಳುಗಳ ಮೃತದೇಹಗಳನ್ನು ಹಮಾಸ್ ಸೋಮವಾರ ಇಸ್ರೇಲಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
ಜೋಶಿಯವರ ಮೃತದೇಹ ಸೋಮವಾರ ತಡರಾತ್ರಿ ಟೆಲ್‌ಅವಿವ್ ತಲುಪಿದೆ ಎಂದು ಇಸ್ರೇಲ್‌ನಲ್ಲಿ ನೇಪಾಳದ ರಾಯಭಾರಿ ಧನಪ್ರಸಾದ ಪಂಡಿತ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಜೋಶಿಯವರ ಗುರುತನ್ನು ದೃಢಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆಯನ್ನು ನಡೆಸಲಿದ್ದಾರೆ. ಬಳಿಕ ನೇಪಾಳ ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಮೃತದೇಹವನ್ನು ಸ್ವದೇಶಕ್ಕೆ ರವಾನಿಸುವ ಮುನ್ನ ಇಸ್ರೇಲ್ ಸರಕಾರವು ಔಪಚಾರಿಕ ಅಂತಿಮ ವಿಧಿಗಳನ್ನು ನಡೆಸಲಿದೆ ಎಂದು ಪಂಡಿತ ತಿಳಿಸಿದರು.
ಹಮಾಸ್ ದಾಳಿಗೆ ಕೇವಲ ಒಂದು ತಿಂಗಳು ಮೊದಲು ಜೋಶಿ ನೇಪಾಳದಿಂದ ಇಸ್ರೇಲ್‌ಗೆ ಆಗಮಿಸಿದ್ದರು. ಅವರು ಗಾಝಾದಲ್ಲಿ ಜೀವಂತವಾಗಿದ್ದಾರೆ ಎಂದು ನಂಬಲಾಗಿದ್ದ ಏಕೈಕ ಇಸ್ರೇಲಿಯೇತರ ಒತ್ತೆಯಾಳಾಗಿದ್ದರು. ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಗಾಝಾ ಗಡಿಗೆ ಸಮೀಪದ ಕಿಬ್ಬುಟ್ಜ್ ಅಲಿಮಮ್‌ನಲ್ಲಿ ಕೃಷಿ ಅಧ್ಯಯನ ಮತ್ತು ಕೆಲಸಕ್ಕಾಗಿ ಆಗಮಿಸಿದ್ದ 17 ನೇಪಾಳಿ ವಿದ್ಯಾರ್ಥಿಗಳಲ್ಲಿ ಜೋಶಿ ಓರ್ವರಾಗಿದ್ದರು.
ಆಗಸ್ಟ್‌ನಲ್ಲಿ ಅಧ್ಯಕ್ಷ ಇಸಾಕ್ ಹೆರ್ಝಾಗ್ ಅವರನ್ನು ಭೇಟಿಯಾಗಲು ಮತ್ತು ಟೆಲ್‌ಅವಿವ್‌ನ ಹೋಸ್ಟೇಜ್ ಸ್ಕ್ವೇರ್‌ನಲ್ಲಿ ಒತ್ತೆಯಾಳುಗಳ ಕುಟುಂಬಗಳ ಪ್ರತಿಭಟನೆಯಲ್ಲಿ ಭಾಗಿಯಾಗಲು ಜೋಶಿ ಕುಟುಂಬವು ಇಸ್ರೇಲ್‌ಗೆ ಪ್ರಯಾಣಿಸಿತ್ತು. ಕಳೆದ ವಾರ ಜೋಶಿ ಕುಟುಂಬವು ಒತ್ತೆಸೆರೆಯಲ್ಲಿದ್ದ ಜೋಶಿಯ ವೀಡಿಯೊ ತುಣುಕನ್ನು ಬಿಡುಗಡೆಗೊಳಿಸಿತ್ತು. ಇದನ್ನು ನವಂಬರ್ 2023ರ ಸುಮಾರಿಗೆ ಚಿತ್ರೀಕರಿಸಲಾಗಿತ್ತು.
2023ರಲ್ಲಿ ಅಪಹೃತಗೊಂಡಾಗಿನಿಂದಲೂ ಜೋಶಿಯ ಸುಳಿವೇ ಇರಲಿಲ್ಲ. ಇಸ್ರೇಲ್ ಸೇನೆಯು ಇತ್ತೀಚಿಗೆ ಗಾಝಾದಿಂದ ಜೋಶಿ ಜೀವಂತವಿರುವುದನ್ನು ತೋರಿಸಿದ್ದ ವೀಡಿಯೊವೊಂದನ್ನು ವಶಪಡಿಸಿಕೊಂಡಾಗ ಭರವಸೆಗಳು ಗರಿಗೆದರಿದ್ದವು. ಆದರೂ ಬಿಡುಗಡೆಗಾಗಿ ಒತ್ತೆಯಾಳುಗಳ ಇತ್ತೀಚಿನ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ.