×
Ad

ನೆತನ್ಯಾಹು ಸರಕಾರಕ್ಕೆ ಬೆಂಬಲ ಹಿಂದೆಗೆದ ಅತಿ ಸಂಪ್ರದಾಯವಾದಿ ಪಕ್ಷ

Update: 2025-07-15 21:20 IST

 ಬೆಂಜಮಿನ್ ನೆತನ್ಯಾಹು | PC :  @netanyahu

ಟೆಲ್ ಅವೀವ್: ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರಕಾರದಿಂದ ಹೊರಬರುವುದಾಗಿ ಇಸ್ರೇಲ್‌ ನ ಅತಿ ಸಂಪ್ರದಾಯವಾದಿ ಪಕ್ಷ ‘ಯುನೈಟೆಡ್ ತೊರಾ ಜುದಾಯಿಸಮ್’ ಮಂಗಳವಾರ ಘೋಷಿಸಿದೆ. ಸಮ್ಮಿಶ್ರ ಸರಕಾರದ ಪ್ರಮುಖ ಭಾಗೀದಾರ ಪಕ್ಷದ ಈ ನಿಲುವು ನೆತನ್ಯಾಹು ಸರಕಾರವನ್ನು ಅಸ್ಥಿರಗೊಳಿಸುವ ಬೆದರಿಕೆಯೊಡ್ಡಿದೆ.

ತಾವು ಪ್ರತಿನಿಧಿಸುತ್ತಿರುವ ಜನರನ್ನು ಸೇನಾ ನೇಮಕಾತಿಯಿಂದ ಹೊರಗಿಡಬೇಕು ಎಂಬುದಾಗಿ ಈ ಧಾರ್ಮಿಕ ಪಕ್ಷವು ಸರಕಾರವನ್ನು ಒತ್ತಾಯಿಸುತ್ತಾ ಬಂದಿದೆ. ಈ ಉದ್ದೇಶದ ಮಸೂದೆಯ ಬಗ್ಗೆ ಉಂಟಾಗಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಕ್ಷವು ಸರಕಾರದಿಂದ ಹಿಂದೆ ಸರಿಯುತ್ತಿದೆ ಎಂದು ಅದರ ಎರಡು ಬಣಗಳು ಹೇಳಿವೆ.

ಸುದೀರ್ಘ ಅವಧಿಯಿಂದ ಕಿಂಗ್‌ಮೇಕರ್ ಆಗಿದ್ದ ಈ ಪಕ್ಷದ ನಿರ್ಗಮನವು ತಕ್ಷಣ ನೆತನ್ಯಾಹು ಸರಕಾರಕ್ಕೆ ಬೆದರಿಕೆಯೊಡ್ಡುವುದಿಲ್ಲ. ಆದರೆ, ಅದರ ನಿರ್ಗಮನವು ಸರಕಾರದ ಬಹುಮತವನ್ನು ಗಣನೀಯವಾಗಿ ಕುಗ್ಗಿಸುತ್ತದೆ. ಹಾಗಾಗಿ, ನೆತನ್ಯಾಹು ಸರಕಾರವು ಎರಡು ತೀವ್ರ ಬಲಪಂಥೀಯ ಪಕ್ಷಗಳನ್ನು ಅತಿಯಾಗಿ ಅವಲಂಬಿಸಬೇಕಾಗುತ್ತದೆ. ಈ ಪಕ್ಷಗಳು ಗಾಝಾದಲ್ಲಿ ಯುದ್ಧವನ್ನು ನಿಲ್ಲಿಸಬಾರದು ಮತ್ತು ವಿರಾಮವನ್ನೂ ನೀಡಬಾರದು ಎಂಬುದಾಗಿ ಒತ್ತಾಯಿಸುತ್ತಿವೆ. ಇಲ್ಲದಿದ್ದರೆ ಸರಕಾರವನ್ನು ತೊರೆಯುವ ಬೆದರಿಕೆಯನ್ನೂ ಒಡ್ಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News