ಆಕ್ರಮಣಶೀಲ ಕಾರ್ಯಕ್ಕೆ ಬಲವಾದ ಪ್ರತ್ಯುತ್ತರ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್ (PTI)
ಇಸ್ಲಾಮಾಬಾದ್, ಅ.12: ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಅಫ್ಘಾನಿಸ್ತಾನದ ಪ್ರಚೋದನಕಾರಿ ಕೃತ್ಯಗಳನ್ನು ಖಂಡಿಸುತ್ತಿದ್ದು ಅಫ್ಘಾನಿಸ್ತಾನದ ಪ್ರತಿಯೊಂದೂ ಆಕ್ರಮಣಶೀಲ ಕಾರ್ಯಕ್ಕೂ ಬಲವಾದ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ರವಿವಾರ ಹೇಳಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳ ವೃತ್ತಿಪರ ಶ್ರೇಷ್ಠತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಪಾಕಿಸ್ತಾನದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ತನ್ನ ಪ್ರತಿಯೊಂದು ಇಂಚಿನಷ್ಟು ಭೂಪ್ರದೇಶವನ್ನೂ ಹೇಗೆ ರಕ್ಷಿಸಿಕೊಳ್ಳಬೇಕೆಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದ 21 ಮಿಲಿಟರಿ ಠಾಣೆಗಳು ಮತ್ತು ಭಯೋತ್ಪಾದಕರ ಅಡಗುದಾಣಗಳನ್ನು ವಶಪಡಿಸಿಕೊಂಡಿದ್ದು ದಾಳಿಯಲ್ಲಿ 200ಕ್ಕೂ ಹೆಚ್ಚು ತಾಲಿಬಾನ್ ಯೋಧರು ಹತರಾಗಿದ್ದಾರೆ ಎಂದು ಪಾಕ್ ಸೇನೆ ಹೇಳಿದೆ.
ಚಮನ್ ಗಡಿಪ್ರದೇಶದ ಬಳಿಯ ಅಸ್ಮಾತುಲ್ಲಾ ಕರ್ರಾರ್ ಶಿಬಿರದ ಮೇಲೆ ಪಾಕ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಗೆ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ತಾಲಿಬಾನ್ ಯೋಧರು ಅಲ್ಲಿಂದ ಪರಾರಿಯಾಗಿದ್ದಾರೆ. ಶಿಬಿರದಿಂದ ಹನ್ನೆರಡಕ್ಕೂ ಅಧಿಕ ಸೇನಾ ವಾಹನಗಳನ್ನು ಪಾಕ್ ಪಡೆ ವಶಕ್ಕೆ ಪಡೆದಿದೆ. ಮಂಜೋಬಾ ಶಿಬಿರ ಸೇರಿದಂತೆ ಗಡಿಯುದ್ದಕ್ಕೂ ತಾಲಿಬಾನ್‍ನ 26 ನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ.
ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳನ್ನು ಸಂಯೋಜಿಸುವ ಕೇಂದ್ರ ನೆಲೆಯೆಂದು ಗುರುತಿಸಲಾದ ಡುರಾನಿ ಕ್ಯಾಂಪ್ ನಂ.2ಕ್ಕೂ ಹಾನಿಯಾಗಿದ್ದು 50ಕ್ಕೂ ಅಧಿಕ ತಾಲಿಬಾನ್ ಮತ್ತು ವಿದೇಶಿ ಹೋರಾಟಗಾರರು ಸಾವನ್ನಪ್ಪಿದ್ದಾರೆ. ಖರ್ಲಾಚಿ ಮತ್ತು ಬರಾಮ್ಚ ಕ್ಷೇತ್ರಗಳಲ್ಲಿ ಡೊರಾನ್ ಮೆಲಾ, ತುರ್ಕ್‍ಮಂಝಾಯ್, ಅಫ್ಘಾನಿ ಶಹೀದಾನ್ ಮತ್ತು ಜಂಡೋಸರ್ ಸೇರಿದಂತೆ ಪ್ರಮುಖ ಅಫ್ಘಾನ್ ಮಿಲಿಟರಿ ಹೊರಠಾಣೆಗಳ ಮೇಲೆ ದಾಳಿ ನಡೆದಿದೆ.
ಅಫ್ಘಾನ್ ಪ್ರದೇಶದೊಳಗೆ ಇದ್ದ ತಾಲಿಬಾನ್ ಟ್ಯಾಂಕ್ ನೆಲೆಯ ಮೇಲೆಯೂ ದಾಳಿ ನಡೆಸಿರುವುದಾಗಿ ಪಾಕಿಸ್ತಾನದ ಸೇನೆಯ ಮೂಲಗಳು ಪ್ರತಿಪಾದಿಸಿವೆ.