×
Ad

ಹಾರ್ಮುಝ್ ಜಲಸಂಧಿಯನ್ನು ಕೆಲವೇ ಗಂಟೆಗಳಲ್ಲಿ ಬಂದ್ ಮಾಡುತ್ತೇವೆ : ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಹೇಳಿಕೆ

Update: 2025-06-22 19:29 IST

 Photo | REUTERS

ಟೆಹರಾನ್ : ಇರಾನ್‌ನ ಪರಮಾಣು ಕೇಂದ್ರದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗಿದೆ. ವಿಶ್ವದ ಅತ್ಯಂತ ನಿರ್ಣಾಯಕ ತೈಲ ಕಾರಿಡಾರ್ ಆಗಿರುವ ಹಾರ್ಮುಝ್ ಜಲಸಂಧಿಯನ್ನು ಕೆಲವೇ ಗಂಟೆಗಳಲ್ಲಿ ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಇರಾನ್ ಹೇಳಿದೆ.

ಅಮೆರಿಕದ ಯುದ್ಧವಿಮಾನಗಳು ಇರಾನ್‌ನ ಫೋರ್ಡೋ, ನಟಾಂಝ್ ಮತ್ತು ಎಸ್ಫಹಾನ್ ಮೇಲೆ ಬಾಂಬ್ ದಾಳಿ ಮಾಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅಮೆರಿಕ ದಾಳಿ ನಡೆಸಿರುವುದನ್ನು ಇರಾನ್ ದೃಡೀಕರಿಸಿತ್ತು. ಇದರ ಬೆನ್ನಲ್ಲೇ ಐಆರ್‌ಜಿಸಿ ನೌಕಾಪಡೆಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಲಿರೆಜಾ ತಂಗ್ಸಿರಿ, ಹಾರ್ಮುಝ್ ಜಲಸಂಧಿಯನ್ನು ಕೆಲವೇ ಗಂಟೆಗಳಲ್ಲಿ ಬಂದ್‌ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಹಾರ್ಮುಝ್ ಜಲಸಂಧಿಯ ಮೂಲಕವೇ ದಿನಕ್ಕೆ ಸುಮಾರು 20 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಾಗಾಟವಾಗುತ್ತದೆ. ಇದು ಜಾಗತಿಕ ದೈನಂದಿನ ಬಳಕೆಯ ಸುಮಾರು ಐದನೇ ಒಂದು ಭಾಗವಾಗಿದೆ.

ಜಲಸಂಧಿಯನ್ನು ಬಂದ್‌ ಮಾಡುವುದರಿಂದ ಸೌದಿ ಅರೇಬಿಯಾ, ಇರಾಕ್, ಯುಎಇ ಮತ್ತು ಕುವೈತ್ ಸೇರಿದಂತೆ ಪ್ರಮುಖ ಗಲ್ಫ್ ರಾಷ್ಟ್ರಗಳಿಂದ ತೈಲ ರಫ್ತು ಆಗುವುದನ್ನು ಕುಗ್ಗಿಸುತ್ತದೆ. ಕೆಲವು ಪರ್ಯಾಯ ಪೈಪ್‌ಲೈನ್‌ಗಳು ಅಸ್ತಿತ್ವದಲ್ಲಿದ್ದರೂ, ಅವುಗಳ ಮೂಲಕ ಸಣ್ಣ ಪ್ರಮಾಣದಲ್ಲಿ ತೈಲ ರಫ್ತು ಸಾಧ್ಯವಾಗಲಿದೆ.

ಜಲಸಂಧಿಯನ್ನು ಬಂದ್‌ ಮಾಡುವುದರಿಂದ ಏಷ್ಯಾ ಮತ್ತು ಯುರೋಪ್‌ಗೆ ಕತಾರ್‌ನಿಂದ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತಿಗೆ ಅಡ್ಡಿಯಾಗುತ್ತದೆ.

ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 90 ಡಾಲರ್ ದಾಟಿದೆ. ಆದರೆ WTI 87 ಡಾಲರ್‌ಗಿಂತ ಹೆಚ್ಚಾಗಿದೆ. ದೀರ್ಘಕಾಲದಿಂದ ಜಲಸಂಧಿಯನ್ನು ಮುಚ್ಚುವುದರಿಂದ ಕಚ್ಚಾ ತೈಲದ ಬೆಲೆ 120 ಡಾಲರ್‌ನಿಂದ 150 ಡಾಲರ್‌ಗೆ ಹೆಚ್ಚಳವಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಇದು ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News