ಸುಡಾನ್ ನಲ್ಲಿ ಎರಡೂ ಬಣಗಳಿಂದ ಯುದ್ದಾಪರಾಧ: ವಿಶ್ವಸಂಸ್ಥೆ ಸತ್ಯಶೋಧನಾ ಆಯೋಗದ ವರದಿ
Photo Credit : aljazeera.com
ನ್ಯೂಯಾರ್ಕ್, ಅ.31: ಸುಡಾನ್ ನ ಅಂತರ್ಯುದ್ಧದಲ್ಲಿ ಹೋರಾಡುತ್ತಿರುವ ಎರಡೂ ಬಣಗಳು (ಸಶಸ್ತ್ರ ಪಡೆ ಮತ್ತು ಅರೆ ಸೇನಾಪಡೆ) ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಸಗಿವೆ ಎಂದು ಸುಡಾನ್ ಬಿಕ್ಕಟ್ಟಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸತ್ಯಶೋಧನಾ ಆಯೋಗ ವರದಿ ನೀಡಿದೆ.
ತನಿಖೆಗಳು `ಜನಾಂಗೀಯವಾಗಿ ಗುರಿಪಡಿಸಿದ ಹತ್ಯೆಗಳು, ಲೈಂಗಿಕ ಹಿಂಸೆ ಮತ್ತು ಉದ್ದೇಶಪೂರ್ವಕವಾಗಿ ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದು' ಸೇರಿದಂತೆ ಎರಡೂ ಬಣಗಳಿಂದ ವ್ಯಾಪಕ ದೌರ್ಜನ್ಯ ನಡೆದಿರುವುದನ್ನು ಆಯೋಗ ದಾಖಲಿಸಿಕೊಂಡಿದೆ ಎಂದು ಆಯೋಗದ ಸದಸ್ಯೆ ಜಾಯ್ ಎಂಗೋಝಿ ಎಝೆಲಿಯೊ ಹೇಳಿದ್ದಾರೆ. ಆಯೋಗವು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮೂರನೇ ಸಮಿತಿಗೆ ತನಿಖಾ ವರದಿಯನ್ನು ಗುರುವಾರ ಸಲ್ಲಿಸಿದೆ.
ಅಲ್-ಫಶರ್ ನಗರದ ಮೇಲೆ ಅರೆ ಸೇನಾಪಡೆ ಮುತ್ತಿಗೆ ಹಾಕಿದ್ದಾಗ ಮತ್ತು ನಗರವು ಅರೆ ಸೇನಾಪಡೆಯನ ನಿಯಂತ್ರಣಕ್ಕೆ ಬಂದ ಬಳಿಕ ನಾಗರಿಕರನ್ನು ಗುರಿಯಾಗಿಸಿದ ದೌರ್ಜನ್ಯವು ತೀವ್ರಗೊಂಡಿದೆ. ರಾಜಕೀಯ ಮತ್ತು ಜನಾಂಗೀಯ ಆಧಾರದಲ್ಲಿ ನಡೆಯುವ ಈ ದೊಡ್ಡ ಪ್ರಮಾಣದ, ವ್ಯವಸ್ಥಿತ ಮತ್ತು ಮಾರಣಾಂತಿಕ ದಾಳಿಗಳು ಯುದ್ದಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಸಮವಾಗಿದೆ. ಅರೆ ಸೇನಾಪಡೆಯ ಎದುರಾಳಿ ಸಶಸ್ತ್ರ ಪಡೆಯಿಂದಲೂ ಗಂಭೀರ ಉಲ್ಲಂಘನೆಯಾಗಿದೆ.
ಜನನಿಬಿಡ ಪ್ರದೇಶಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ವಿವೇಚನಾರಹಿತ ವಾಯುದಾಳಿಗಳು, ನಾಗರಿಕರ ವಿರುದ್ಧ ಪ್ರತೀಕಾರ ದಾಳಿಗಳನ್ನು ಸಶಸ್ತ್ರ ಪಡೆ ನಡೆಸಿರುವುದಕ್ಕೆ ಮತ್ತು ಆಸ್ಪತ್ರೆಗಳನ್ನು, ವೈದ್ಯಕೀಯ ಕಾರ್ಯಕರ್ತರನ್ನು ಮತ್ತು ಮಾನವೀಯ ಕಾರ್ಯಾಚರಣೆಗಳಿಗೆ ರಕ್ಷಣೆ ನೀಡದಿರುವುದಕ್ಕೆ ಪುರಾವೆಗಳಿವೆ ಎಂದು ವರದಿ ಹೇಳಿದೆ.