ಫೆಲೆಸ್ತೀನ್ ಅನ್ನು ಅಧಿಕೃತ ರಾಷ್ಟ್ರವೆಂದು ಗುರುತಿಸುವುದಾಗಿ ಬ್ರಿಟನ್ ಘೋಷಣೆ
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ PC | PTI
ಲಂಡನ್: ಗಾಝಾದಲ್ಲಿ ಇಸ್ರೇಲ್ ಆಕ್ರಮಣ ಖಂಡಿಸಿ, ಸೆಪ್ಟೆಂಬರ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲು ಫೆಲೆಸ್ತೀನ್ ರಾಷ್ಟ್ರವನ್ನು ಅಧಿಕೃತ ರಾಷ್ಟ್ರವೆಂದು ಗುರುತಿಸುವುದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಸರ್ಕಾರ ಮಂಗಳವಾರ ತಿಳಿಸಿದೆ.
ಪ್ರಧಾನಿ ಸ್ಟಾರ್ಮರ್ ಅವರು ಬೇಸಿಗೆ ರಜೆಯಲ್ಲಿದ್ದ ತಮ್ಮ ಸಂಪುಟದ ಸಚಿವರೊಂದಿಗೆ ಗಾಝಾದಲ್ಲಿನ ಶಾಂತಿ ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು. “ಗಾಝಾದಲ್ಲಿನ ಭಯಾನಕ ಪರಿಸ್ಥಿತಿಗೆ ಅಂತ್ಯ ಹಾಡಲು ಇಸ್ರೇಲ್ ಸರ್ಕಾರವು ಗಂಭೀರ ಕ್ರಮಗಳನ್ನು ಕೈಗೊಳ್ಳದಿದ್ದರೆ, ಸೆಪ್ಟೆಂಬರ್ ವೇಳೆಗೆ ಬ್ರಿಟನ್ ಫೆಲೆಸ್ತೀನ್ ದೇಶವನ್ನು ಗುರುತಿಸಲಿದೆ,” ಎಂದು ಬ್ರಿಟನ್ ಸರಕಾರದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯಾವುದೇ ಸಮಾನತೆ ಇಲ್ಲ, ಹಮಾಸ್ ಕುರಿತ ನಮ್ಮ ಬೇಡಿಕೆಗಳು ಹಾಗೆಯೇ ಉಳಿದಿವೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಪುನರುಚ್ಚರಿಸಿದರು. ಎಲ್ಲಾ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕು. ಕದನ ವಿರಾಮಕ್ಕೆ ಸಹಿ ಹಾಕಬೇಕು. ಗಾಝಾ ಸರ್ಕಾರದಲ್ಲಿ ಅವರು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಒಪ್ಪಿಕೊಳ್ಳಬೇಕು ಮತ್ತು ಶಸ್ತ್ರಾಸ್ತ್ರವನ್ನು ತ್ಯಜಿಸಬೇಕು ಎಂದು ಬ್ರಿಟನ್ ಬೇಡಿಕೆಯಿಟ್ಟಿದೆ.
ಗಾಝಾದಲ್ಲಿ ಹೆಚ್ಚುತ್ತಿರುವ ಹಸಿವಿನ ಬಿಕ್ಕಟ್ಟಿನ ನಡುವೆ, ಲೇಬರ್ ಪಕ್ಷದ ಒಳಗಿನಿಂದಲೇ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವಂತೆ ಒತ್ತಡ ಹೆಚ್ಚಾಗುತ್ತಿತ್ತು. ಇದೇ ವೇಳೆ, ಫ್ರಾನ್ಸ್ ಕೂಡ ಸೆಪ್ಟೆಂಬರ್ ನಲ್ಲಿ ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವ ನಿರ್ಧಾರವನ್ನು ಪ್ರಕಟಿಸಿದೆ.