ತಪ್ಪು ಮಾಡಿದರೆ Venezuela ಮೇಲೆ ಮತ್ತೆ ದಾಳಿ: ಮಧ್ಯಂತರ ಅಧ್ಯಕ್ಷೆ ಡೆಲ್ಸಿಗೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್, ಜ.5: ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರಾಡ್ರಿಗೆಸ್ ಸರಿಯಾದುದನ್ನು ಮಾಡದಿದ್ದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ` ವೆನೆಝುವೆಲಾದಲ್ಲಿ ತೈಲ ಉದ್ಯಮವನ್ನು ತೆರೆಯುವ ಮತ್ತು ಮಾದಕ ವಸ್ತು ಕಳ್ಳಸಾಗಣೆಯನ್ನು ನಿಲ್ಲಿಸುವ ಅಮೆರಿಕಾದ ಪ್ರಯತ್ನಗಳಿಗೆ' ಅಲ್ಲಿನ ಸರಕಾರ ಸಹಕರಿಸದಿದ್ದರೆ ಆ ದೇಶದ ಮೇಲೆ ಮತ್ತೊಂದು ದಾಳಿಗೆ ಆದೇಶಿಸಬಹುದು' ಎಂದು ಹೇಳಿದ್ದಾರೆ. ಕೊಲಂಬಿಯಾ, ಮೆಕ್ಸಿಕೋದಲ್ಲಿ ಮಿಲಿಟರಿ ಕ್ರಮಗಳ ಬಗ್ಗೆ ಎಚ್ಚರಿಕೆ ರವಾನಿಸಿರುವ ಟ್ರಂಪ್, ಕ್ಯೂಬಾದ ಕಮ್ಯುನಿಸ್ಟ್ ಆಡಳಿತ ತನ್ನಿಂದ ತಾನೇ ಪತನಗೊಳ್ಳಲು ಸಿದ್ಧವಾಗಿರುವಂತೆ ಕಾಣುತ್ತದೆ ಎಂದಿದ್ದಾರೆ. ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ್ದ ಟ್ರಂಪ್ ಅಮೆರಿಕಾ ತಾತ್ಕಾಲಿಕವಾಗಿ ವೆನೆಝುವೆಲಾದ ಆಡಳಿತವನ್ನು ನಿರ್ವಹಿಸಲಿದೆ ಎಂದು ಹೇಳಿದ್ದು ನಿಕೊಲಸ್ ಮಡುರೊ ವಿರುದ್ಧದ ಪ್ರಕರಣ ದೋಷಾತೀತ ಆಗಿರುವುದರಿಂದ ಅವರಿಗೆ ಶಿಕ್ಷೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ಮಧ್ಯೆ, ವೆನೆಝುವೆಲಾ ತನ್ನ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುತ್ತದೆ ಎಂದು ಡೆಲ್ಸಿ ರಾಡ್ರಿಗೆಸ್ ಹೇಳಿರುವುದಾಗಿ ವರದಿಯಾಗಿದೆ.
►ಅಮೆರಿಕಾದ ಸಹಕಾರ ಬಯಸಿದ ಡೆಲ್ಸಿ ರಾಡ್ರಿಗೆಸ್
ಅಮೆರಿಕಾದೊಂದಿಗೆ `ಹಂಚಿಕೊಂಡ ಅಭಿವೃದ್ಧಿಯ' ಮೇಲೆ ಕೇಂದ್ರೀಕರಿಸಿದ ಕಾರ್ಯಸೂಚಿಯಲ್ಲಿ ಸಹಕರಿಸಲು ವೆನೆಝುವೆಲಾ ಸಿದ್ದ ಎಂದು ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರಾಡ್ರಿಗೆಸ್ ಹೇಳಿದ್ದಾರೆ.
ತಮ್ಮ ಸರಕಾರವು ಅಮೆರಿಕಾದೊಂದಿಗೆ ಗೌರವಾನ್ವಿತ ಸಂಬಂಧಗಳತ್ತ ಸಾಗಲು ಆದ್ಯತೆ ನೀಡುತ್ತಿದೆ ಎಂದು ರಾಡ್ರಿಗೆಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. `ಶನಿವಾರ ಅಮೆರಿಕಾ ನಡೆಸಿದ ದಾಳಿಯು ದೇಶದ ರಾಷ್ಟ್ರೀಯ ಸಂಪನ್ಮೂಲಗಳ ಅಕ್ರಮ ದೋಚುವಿಕೆ' ಎಂದು ವೆನೆಝುವೆಲಾದ ಆಡಳಿತ ಇದಕ್ಕೂ ಮುನ್ನ ಟೀಕಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.