Venezuelaವನ್ನು ಆಳುವುದಿಲ್ಲ; ತೈಲ ಕ್ವಾರಂಟೈನ್ ಜಾರಿಗೊಳಿಸುತ್ತೇವೆ: ವಿದೇಶಾಂಗ ಕಾರ್ಯದರ್ಶಿ ರೂಬಿಯೊ
ಮಾರ್ಕೋ ರೂಬಿಯೊ , ಡೊನಾಲ್ಡ್ ಟ್ರಂಪ್ | Photo Credit : Bloomberg
ವಾಷಿಂಗ್ಟನ್, ಜ.5: ವೆನೆಝುವೆಲಾದ ದೈನಂದಿನ ಆಡಳಿತವನ್ನು ನಿರ್ವಹಿಸಲು ಅಮೆರಿಕಾ ಯೋಜಿಸಿಲ್ಲ. ವೆನೆಝುವೆಲಾದಲ್ಲಿ ತೈಲ `ಕ್ವಾರಂಟೈನ್' ಜಾರಿಗೊಳಿಸುವುದಕ್ಕೆ ಮಾತ್ರ ಅಮೆರಿಕಾದ ಪಾತ್ರ ಸೀಮಿತವಾಗಿರುತ್ತದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಹೇಳಿದ್ದಾರೆ.
`ವೆನೆಝುವೆಲಾದ ಆಡಳಿತವನ್ನು ತಾತ್ಕಾಲಿಕವಾಗಿ ಅಮೆರಿಕಾ ನಿರ್ವಹಿಸಲಿದೆ' ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ರೂಬಿಯೊ ಈ ಮೇಲಿನಂತೆ ಸ್ಪಷ್ಟೀಕರಣ ನೀಡಿದ್ದಾರೆ. ಇದರೊಂದಿಗೆ ಅಮೆರಿಕಾದ ಕ್ರಮವು ದೀರ್ಘಾವಧಿಯ ವಿದೇಶಿ ಹಸ್ತಕ್ಷೇಪವಾಗಿ ಬದಲಾಗಬಹುದು ಎಂಬ ಕಳವಳ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. `ನಿರ್ಬಂಧಿತ ತೈಲ ಟ್ಯಾಂಕರ್ ಗಳ ಮೇಲೆ ನಿಗಾ ವಹಿಸುವುದನ್ನು ಮುಂದುವರಿಸುತ್ತದೆ. ತೈಲ ಕ್ವಾರಂಟೈನ್ ಮೂಲಕ ಬದಲಾವಣೆ ತರುವುದು ನಮ್ಮ ಉದ್ದೇಶವಾಗಿದೆ. ಇದು ಜನರಿಗೆ ಪ್ರಯೋಜನವಾಗುವುದಷ್ಟೇ ಅಲ್ಲ, ಮಾದಕ ವಸ್ತು ಕಳ್ಳಸಾಗಣೆಯನ್ನೂ ತಡೆಯುತ್ತದೆ ಎಂದವರು ಹೇಳಿದ್ದಾರೆ.
ವೆನೆಝುವೆಲಾದಲ್ಲಿನ ಪರಿಸ್ಥಿತಿಯನ್ನು ಲಿಬಿಯಾ, ಇರಾಕ್, ಅಫ್ಘಾನಿಸ್ತಾನದ ಪರಿಸ್ಥಿತಿಗೆ ಹೋಲಿಕೆ ಮಾಡಬಾರದು. ಮುಂದಿನ ಕ್ರಮಗಳನ್ನು ನಿರ್ಧರಿಸುವ ಮೊದಲು ಪ್ರಸ್ತುತ ದೇಶವನ್ನು ನಡೆಸುತ್ತಿರುವ ಅಧಿಕಾರಿಗಳು ಹೇಗೆ ವರ್ತಿಸುತ್ತಾರೆ ಎಂಬುದನ್ನು ಅಮೆರಿಕಾ ಗಮನಿಸಲಿದೆ ಎಂದು ರೂಬಿಯೊ ಹೇಳಿರುವುದಾಗಿ ವರದಿಯಾಗಿದೆ.