ಕ್ಯಾರಕಾಸ್‌ನಲ್ಲಿ ಸ್ಫೋಟ; ತುರ್ತು ಪರಿಸ್ಥಿತಿ ಘೋಷಿಸಿದ ವೆನೆಝುವೆಲಾ ಅಧ್ಯಕ್ಷ ಮಡುರೊ
ಅಮೆರಿಕದಿಂದ ‘ಮಿಲಿಟರಿ ಆಕ್ರಮಣ’ ಆರೋಪ
Photo credit: PTI
ಕ್ಯಾರಕಾಸ್: ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ನಡೆಸಿದೆ ಎಂದು ಆರೋಪಿಸಿರುವ “ಅತ್ಯಂತ ಗಂಭೀರ ಮಿಲಿಟರಿ ಆಕ್ರಮಣ”ದ ವಿರುದ್ಧ ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಶನಿವಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಶನಿವಾರ ಮುಂಜಾನೆ ನಗರದಾದ್ಯಂತ ಯುದ್ಧ ವಿಮಾನಗಳ ಭಾರೀ ಶಬ್ದದೊಂದಿಗೆ ಹಲವು ಸ್ಫೋಟಗಳು ಕೇಳಿಬಂದಿವೆ ಎಂದು ಎಎಫ್‌ಪಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಈ ಶಬ್ದಗಳು ಸ್ಥಳೀಯ ಸಮಯ ಬೆಳಿಗ್ಗೆ ಸುಮಾರು 2 ಗಂಟೆ ಸುಮಾರಿಗೆ ಕೇಳಿಬಂದಿದ್ದು, ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.
ಕ್ಯಾರಕಾಸ್‌ನಲ್ಲಿ ಸಂಭವಿಸಿದ ಸ್ಫೋಟಗಳನ್ನು ಅಮೆರಿಕ ನಡೆಸಿದ “ಮಿಲಿಟರಿ ಆಕ್ರಮಣ” ಎಂದು ವೆನೆಝುವೆಲಾ ಸರ್ಕಾರ ಆರೋಪಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಾಜಧಾನಿ ಕ್ಯಾರಕಾಸ್ ಜೊತೆಗೆ ಮಿರಾಂಡಾ, ಅರಾಗುವಾ ಹಾಗೂ ಲಾ ಗೈರಾ ರಾಜ್ಯಗಳಲ್ಲಿಯೂ ದಾಳಿಗಳು ನಡೆದಿವೆ ಎಂದು ʼದಿ ಗಾರ್ಡಿಯನ್ʼ ವೆನೆಝುವೆಲಾ ಸರ್ಕಾರವನ್ನು ಉಲ್ಲೇಖಿಸಿ ತಿಳಿಸಿದೆ.
ಅಮೆರಿಕದ ದಾಳಿಯ ನಂತರ ಅಧ್ಯಕ್ಷ ಮಡುರೊ ತಕ್ಷಣ ತುರ್ತು ಪರಿಸ್ಥಿತಿ ಘೋಷಿಸಿ, ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸುವಂತೆ ಕರೆ ನೀಡಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ಈ ಆರೋಪಗಳ ಕುರಿತು ಯುನೈಟೆಡ್ ಸ್ಟೇಟ್ಸ್ ಸರ್ಕಾರ ಅಥವಾ ಯುಎಸ್ ಮಿಲಿಟರಿ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವೆನೆಝುವೆಲಾದ ಕರಾವಳಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ದೋಣಿಗಳನ್ನು ಗುರಿಯಾಗಿಸಿಕೊಂಡು ಯುಎಸ್ ಮಿಲಿಟರಿ ದಾಳಿಗಳನ್ನು ನಡೆಸುತ್ತಿರುವ ಹಿನ್ನೆಲೆ ಈ ಘಟನೆಗೆ ಕಾರಣವಾಗಿರಬಹುದು ಎಂದು ವರದಿಗಳು ಹೇಳಿವೆ.
ಆಗಸ್ಟ್ ಅಂತ್ಯದಿಂದ ಲ್ಯಾಟಿನ್ ಅಮೆರಿಕಾದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡುವ ಉದ್ದೇಶದಿಂದ ಅಮೆರಿಕ ವೆನೆಝುವೆಲಾದ ಕರಾವಳಿಯಲ್ಲಿ ಪ್ರಮುಖ ಮಿಲಿಟರಿ ನಿಯೋಜನೆಯನ್ನು ಮಾಡಿದ್ದು, ಅದರ ಗಮನ ಹೆಚ್ಚಾಗಿ ವೆನೆಝುವೆಲಾದ ಮೇಲೆಯೇ ಕೇಂದ್ರೀಕೃತವಾಗಿದೆ ಎಂದು ತಿಳಿದು ಬಂದಿದೆ.
ವೆನೆಝುವೆಲಾದಲ್ಲಿ ಮಡುರೊ ಸರ್ಕಾರವನ್ನು ಅಧಿಕೃತವಾಗಿ ಗುರುತಿಸದ ಪಶ್ಚಿಮ ರಾಷ್ಟ್ರಗಳಲ್ಲಿ ಅಮೆರಿಕವೂ ಒಂದಾಗಿದ್ದು, ಅದು ಬಹುಕಾಲದಿಂದಲೇ ವೆನೆಝುವೆಲಾದ ವಿರೋಧ ಪಕ್ಷಗಳಿಗೆ ಬೆಂಬಲ ನೀಡುತ್ತಿದೆ.
ವೆನೆಝುವೆಲಾದೊಳಗೆ ಮಿಲಿಟರಿ ಕ್ರಮ ಕೈಗೊಳ್ಳುವ ಉದ್ದೇಶವಿದೆ ಎಂಬ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ನೀಡಿದ್ದರು. ಆ ಬಳಿಕ ಎರಡು ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.