×
Ad

Venezuela ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೆರೆ ಹಿಡಿದಿದ್ದು ಹೇಗೆ?; ಮುಂದೇನಾಗಲಿದೆ?

Update: 2026-01-05 20:29 IST

Photo Credit : AP \  PTI 

ವೆನೆಝುವೆಲಾದಲ್ಲಿ ಅಮೆರಿಕ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿಯಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಡುರೊ ಈಗ ಅಮೆರಿಕದಲ್ಲಿ ಮಾದಕದ್ರವ್ಯ–ಭಯೋತ್ಪಾದನೆಗೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ ವೆನೆಝುವೆಲಾದ ರಾಜಧಾನಿ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಈ ಕಾರ್ಯಾಚರಣೆಯನ್ನು ಯುಎಸ್ ಮಿಲಿಟರಿಯ ಉನ್ನತ ವಿಶೇಷ ಮಿಷನ್ ಘಟಕವಾದ ಡೆಲ್ಟಾ ಫೋರ್ಸ್ ನಡೆಸಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

►ಏನಿದು ಡೆಲ್ಟಾ ಫೋರ್ಸ್?

1977ರಲ್ಲಿ ಕರ್ನಲ್ ಚಾರ್ಲ್ಸ್ ಬೆಕ್ವಿತ್ ಅವರು ಸ್ಥಾಪಿಸಿದ ಡೆಲ್ಟಾ ಫೋರ್ಸ್ ಉತ್ತರ ಕೆರೊಲಿನಾದ ಫೋರ್ಟ್ ಬ್ರಾಗ್‌ನಲ್ಲಿ ನೆಲೆಗೊಂಡಿದೆ. ಇದು ವಿಶ್ವದ ಅತ್ಯಂತ ಗಣ್ಯ ಮತ್ತು ರಹಸ್ಯ ಮಿಲಿಟರಿ ಘಟಕಗಳಲ್ಲಿ ಒಂದಾಗಿದೆ.

ಯುಎಸ್ ಆರ್ಮಿ ಸ್ಪೆಷಲ್ ಆಪರೇಷನ್ಸ್ ಕಮಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಪಡೆ, ಜಾಯಿಂಟ್ ಸ್ಪೆಷಲ್ ಆಪರೇಷನ್ಸ್ ಕಮಾಂಡ್ (JSOC) ಆದೇಶಗಳನ್ನು ಪಾಲಿಸುತ್ತದೆ. ಇದನ್ನು 1ನೇ ಸ್ಪೆಷಲ್ ಫೋರ್ಸಸ್ ಆಪರೇಶನಲ್ ಡಿಟ್ಯಾಚ್‌ಮೆಂಟ್–ಡೆಲ್ಟಾ (1ನೇ SFOD-D) ಎಂದೂ ಕರೆಯಲಾಗುತ್ತದೆ. ಇದರ ರಚನೆ ಬ್ರಿಟಿಷ್ SAS (22ನೇ ವಿಶೇಷ ವಾಯು ಸೇವಾ ರೆಜಿಮೆಂಟ್) ಮಾದರಿಯಲ್ಲಿದೆ.

►ಡೆಲ್ಟಾ ಫೋರ್ಸ್ ಮುಖ್ಯ ಕಾರ್ಯಾಚರಣೆ ಯಾವ ರೀತಿಯದ್ದು?

ಈ ಘಟಕವು ಹೆಚ್ಚಿನ ಅಪಾಯ ಮತ್ತು ಹೆಚ್ಚಿನ ಮೌಲ್ಯದ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದೆ. ಭಯೋತ್ಪಾದನೆ ನಿಗ್ರಹ, ಒತ್ತೆಯಾಳುಗಳ ರಕ್ಷಣೆ, ಭಯೋತ್ಪಾದಕ ಬೆದರಿಕೆಗಳ ನಿರ್ಮೂಲನೆ, ಸೆರೆಹಿಡಿಯುವಿಕೆ ಮತ್ತು ಇತರ ವಿಶೇಷ ಕಾರ್ಯಾಚರಣೆಗಳನ್ನು ಮುಖ್ಯವಾಗಿ ನಡೆಸುತ್ತದೆ.

ಉನ್ನತ ಮಟ್ಟದ ವ್ಯಕ್ತಿಗಳಿಗೆ ನಿಕಟ ರಕ್ಷಣೆ, ಅಸಾಂಪ್ರದಾಯಿಕ ಯುದ್ಧ ತಂತ್ರಗಳು, ಸ್ನೈಪಿಂಗ್, ಕ್ಲೋಸ್–ಕ್ವಾರ್ಟರ್ಸ್ ಯುದ್ಧ, ಸ್ಫೋಟಕಗಳ ಬಳಕೆ ಮತ್ತು ರಹಸ್ಯ ಪ್ರವೇಶ ತಂತ್ರಗಳಲ್ಲಿ ಈ ಘಟಕದ ಸಿಬ್ಬಂದಿ ನುರಿತರಾಗಿದ್ದಾರೆ. ವಿಮಾನಗಳು, ರೈಲುಗಳು, ಹಡಗುಗಳು ಮತ್ತು ವಾಹನಗಳಲ್ಲಿ ಕಾರ್ಯಾಚರಣೆ ನಡೆಸುವ ತರಬೇತಿಯನ್ನು ಈ ಪಡೆ ಪಡೆದಿದೆ.

ಮಡುರೊ ಮತ್ತು ಅವರ ಪತ್ನಿಯನ್ನು ಕೋಟೆಯಂತಿದ್ದ ಮನೆಯಿಂದ ಸೆರೆ ಹಿಡಿದು, ಹಡಗಿನಲ್ಲಿ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

►ಮಡುರೊ ಭವಿಷ್ಯವೇನು?

ಮಡುರೊ ಮತ್ತು ಅವರ ಪತ್ನಿಯ “ಬಂಧನ”ದ ಬಳಿಕ, ಯುಎಸ್ ಅಟಾರ್ನಿ ಜನರಲ್ ಪಮೇಲಾ ಬೋಂಡಿ ಅವರು ದಂಪತಿಗಳ ವಿರುದ್ಧ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯಲ್ಲಿ ಈಗಾಗಲೇ ದೋಷಾರೋಪಣೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ Xನಲ್ಲಿ ಬರೆದಿದ್ದಾರೆ.

ಅವರು ಮಡುರೊ ಮತ್ತು ಅವರ ಪತ್ನಿ ಶೀಘ್ರದಲ್ಲೇ ಅಮೆರಿಕದ ನೆಲದಲ್ಲೇ ಅಮೆರಿಕದ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಕಾರ್ಯಾಚರಣೆಗೆ ಸಂಬಂಧಿಸಿ ಯುಎಸ್ ಮಿಲಿಟರಿ ಮತ್ತು ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ವರ್ಷಗಳಿಂದ ಅಮೆರಿಕ ಸರ್ಕಾರವು ಮಡುರೊ ಅವರನ್ನು ನಾಯಕನಾಗಿ ಅಲ್ಲ, ಉನ್ನತ ಮಟ್ಟದ ಅಪರಾಧಿಯಾಗಿ ನೋಡುತ್ತಿದೆ. “ಕಾರ್ಟೆಲ್ ಆಫ್ ದಿ ಸನ್” ಎಂದು ಕರೆಯಲ್ಪಡುವ ಮಾದಕವಸ್ತು ಕಳ್ಳಸಾಗಣೆ ಗುಂಪಿನ ನೇತೃತ್ವವನ್ನು ಮಡುರೊ ವಹಿಸಿದ್ದರು ಎಂದು ಯುಎಸ್ ಅಧಿಕಾರಿಗಳು ಆರೋಪಿಸಿದ್ದಾರೆ.

ವೆನೆಝುವೆಲಾದ ಉನ್ನತ ಶ್ರೇಣಿಯ ಮಿಲಿಟರಿ ಅಧಿಕಾರಿಗಳು ತಮ್ಮ ಸಮವಸ್ತ್ರದಲ್ಲಿ ಧರಿಸುವ ಸೂರ್ಯನ ಆಕಾರದ ನಕ್ಷತ್ರಗಳಿಂದ ಈ ಹೆಸರನ್ನು ಪಡೆದಿದೆ ಎಂದು ಹೇಳಲಾಗಿದೆ.

ಅಮೆರಿಕದ ಜನರ “ಆರೋಗ್ಯವನ್ನು ಹಾಳುಮಾಡುವ” ಉದ್ದೇಶದಿಂದ ಮಡುರೊ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಮೆರಿಕವನ್ನು ಕೊಕೇನ್‌ನಿಂದ ತುಂಬಿಸಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ವಾದಿಸುತ್ತಾರೆ.

2020ರ ದೋಷಾರೋಪಣೆಯ ನಂತರ ಮಡುರೊ ಸೆರೆಹಿಡಿಯಲ್ಪಟ್ಟರೆ ನೀಡಲಾಗುವ ಬಹುಮಾನವನ್ನು 50 ಮಿಲಿಯನ್‌ ಡಾಲರ್ ಗೆ ದ್ವಿಗುಣಗೊಳಿಸುವುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿತ್ತು. ಸುಮಾರು ಏಳು ಟನ್ ಕೊಕೇನ್ ನೇರವಾಗಿ ಮಡುರೊಗೆ ಸಂಬಂಧಿಸಿದೆ ಎಂದು ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಆರೋಪಿಸಿದ್ದಾರೆ.

2019ರಿಂದ ಅಮೆರಿಕ ಮಡುರೊ ಅವರನ್ನು ಕಾನೂನುಬದ್ಧ ಅಧ್ಯಕ್ಷರೆಂದು ಗುರುತಿಸದಿರುವ ಕಾರಣ, ಶನಿವಾರ ನಡೆದ ಈ ಮಿಲಿಟರಿ ಕಾರ್ಯಾಚರಣೆಯನ್ನು ಯುದ್ಧವಲ್ಲ, “ಮಾದಕವಸ್ತು ವಿರೋಧಿ ಕಾರ್ಯಾಚರಣೆ” ಎಂದು ಅಮೆರಿಕ ಹೇಳಿದೆ.

►1989ರಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆದಿತ್ತು

1989ರ ಕೊನೆಯಲ್ಲಿ ಪನಾಮಾದ ಮಿಲಿಟರಿ ಆಡಳಿತಗಾರ ಮ್ಯಾನುಯೆಲ್ ನೊರಿಗಾ ಅವರನ್ನು ಅಧಿಕಾರದಿಂದ ತೆಗೆದುಹಾಕಲು 'Operation Just Cause' ನಡೆಸಲಾಗಿತ್ತು. ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯೂ. ಬುಷ್ ಅವರು 20,000 ಸೈನಿಕರನ್ನು ಪನಾಮಕ್ಕೆ ಕಳುಹಿಸಿದ್ದರು.

ಬಿಬಿಸಿ ವಿಶ್ಲೇಷಣೆಯ ಪ್ರಕಾರ, ಶನಿವಾರ ವೆನೆಝುವೆಲಾದಲ್ಲಿ ನಡೆದ ಅಮೆರಿಕ ಕಾರ್ಯಾಚರಣೆ ಇದನ್ನೇ ಹೋಲುತ್ತದೆ. ನೊರಿಗಾ ಮತ್ತು ಮಡುರೊ ಇಬ್ಬರೂ ಚುನಾವಣೆಗಳಲ್ಲಿ ಗೆದ್ದಿದ್ದರು; ಆದರೆ ಆ ಗೆಲುವು ಮೋಸದ ಫಲ ಎಂದು ಅನೇಕರು ಆರೋಪಿಸಿದ್ದರು. ಇಬ್ಬರ ಮೇಲೂ ಮಾದಕವಸ್ತು ಕಳ್ಳಸಾಗಣೆ ಆರೋಪಗಳಿದ್ದವು. ಯುಎಸ್ ಮಿಲಿಟರಿ ಇಬ್ಬರನ್ನೂ ನೇರವಾಗಿ ಗುರಿಯಾಗಿಸಿತ್ತು.

ಆದರೆ ನೊರಿಗಾ ಅವರನ್ನು ಸೆರೆಹಿಡಿದ ವಿಧಾನ ಮಡುರೊನ ಬಂಧನಕ್ಕಿಂತ ಭಿನ್ನವಾಗಿತ್ತು. ನೊರಿಗಾ ವ್ಯಾಟಿಕನ್‌ನ ರಾಜತಾಂತ್ರಿಕ ಕಟ್ಟಡದೊಳಗೆ 11 ದಿನಗಳ ಕಾಲ ಅಡಗಿಕೊಂಡಿದ್ದರು. ಯುಎಸ್ ಪಡೆಗಳು ಕಟ್ಟಡವನ್ನು ಸುತ್ತುವರಿದು, ಹಗಲು–ರಾತ್ರಿ ಜೋರಾಗಿ ರಾಕ್ ಸಂಗೀತವನ್ನು ಮೊಳಗಿಸಿ ಮಾನಸಿಕ ಕಿರಿಕಿರಿ ಸೃಷ್ಟಿಸಿದ್ದವು. ಕೊನೆಗೆ ನೊರಿಗಾ 1990ರ ಜನವರಿ 3ರಂದು ಶರಣಾದರು.

►ಅಮೆರಿಕದಲ್ಲಿ ಮಡುರೊಗೆ ಯಾವ ರೀತಿಯ ಕಾನೂನು ಹೋರಾಟ ಕಾದಿದೆ?

ಮಡುರೊ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಬೇಕಾಗಿದೆ. 36 ವರ್ಷಗಳ ಹಿಂದೆ ಪನಾಮಾದ ಮ್ಯಾನುಯೆಲ್ ನೊರಿಗಾ ಅವರನ್ನು ಮಿಯಾಮಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ಮೇಲೆ ಮಾದಕವಸ್ತು ಕಳ್ಳಸಾಗಣೆ, ದರೋಡೆ ಮತ್ತು ಹಣ ವರ್ಗಾವಣೆ ಆರೋಪಗಳು ದಾಖಲಾಗಿದ್ದವು.

ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯಲ್ಲಿ 2020ರಲ್ಲಿ ಸಲ್ಲಿಸಲಾದ ಫೆಡರಲ್ ದೋಷಾರೋಪಣೆಯ ಆಧಾರದ ಮೇಲೆ ಮಡುರೊ ಕೂಡ ಇದೇ ರೀತಿಯ ಕಾನೂನು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. 28 ಪುಟಗಳ ಕಾನೂನು ದಾಖಲೆಯಲ್ಲಿ ಅವರ ಮೇಲೆ ಮಾದಕವಸ್ತು–ಭಯೋತ್ಪಾದನೆ ಮತ್ತು ಕೊಕೇನ್ ಆಮದು ಮಾಡಲು ಪಿತೂರಿ ನಡೆಸಿದ ಆರೋಪಗಳಿವೆ.

ಮಡುರೊ ವಿರುದ್ಧದ ಆರೋಪಗಳು ಅತ್ಯಂತ ಗಂಭೀರವಾಗಿದ್ದು, ಭಾರೀ ದಂಡದ ಜೊತೆಗೆ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಮಾದಕವಸ್ತು–ಭಯೋತ್ಪಾದನಾ ಅಪರಾಧಕ್ಕೆ ಕನಿಷ್ಠ 20 ವರ್ಷಗಳಿಂದ ಗರಿಷ್ಠ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವೆನೆಝುವೆಲಾದ ಮೂಲಕ ಮಾದಕವಸ್ತು ಸಾಗಿಸಲು ‘FARC’ ಎಂಬ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಯೊಂದಿಗೆ ಕೆಲಸ ಮಾಡಿದ ಆರೋಪವೂ ಮಡುರೊ ಮೇಲಿದೆ. ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಮಡುರೊ ವಿಚಾರಣೆಗೆ ಒಳಗಾಗುವ ನಿರೀಕ್ಷೆಯಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಈಗಾಗಲೇ ದೃಢಪಡಿಸಿದ್ದಾರೆ.

ದೋಷಾರೋಪಣೆ ಮತ್ತು ಆರೋಪಗಳನ್ನು ಪರಿಗಣಿಸಿದರೆ, ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಭವಿಷ್ಯವೂ ಮಡುರೊಗಿಂತ ಭಿನ್ನವಾಗಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

►ಮಡುರೊ ಮರಳಿ ಬರಬಹುದೇ?

ಮಡುರೊ ಮರಳಿ ವೆನೆಝುವೆಲಾಕ್ಕೆ ಬರಲು ಅವಕಾಶಗಳು ಕಡಿಮೆ. ಅಮೆರಿಕದಲ್ಲಿ ಶಿಕ್ಷೆಗೊಳಗಾದ ನಂತರ ನೊರಿಗಾ ತಮ್ಮ ಉಳಿದ ಜೀವನವನ್ನು ಬಂಧನದಲ್ಲೇ ಕಳೆದಿದ್ದರು. ಅವರು ಅಮೆರಿಕದ ಜೈಲಿನಿಂದ ಫ್ರಾನ್ಸ್‌ನ ಜೈಲಿಗೆ ಸ್ಥಳಾಂತರಗೊಂಡು, ಬಳಿಕ ಪನಾಮದಲ್ಲಿ ಗೃಹಬಂಧನದಲ್ಲಿದ್ದರು. ನೊರಿಗಾ 2017ರಲ್ಲಿ 83ನೇ ವಯಸ್ಸಿನಲ್ಲಿ ನಿಧನರಾದರು.

ಮಡುರೊ ಬಂಧನದ ಬಳಿಕ ವೆನೆಝುವೆಲಾ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇದೇ ವೇಳೆ ಅಮೆರಿಕವು ವೆನೆಝುವೆಲಾದಲ್ಲಿ ಮುಂದಿನ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳುವ ಯೋಜನೆ ಇಲ್ಲ ಎಂದು ಹೇಳಿದೆ.

►ಮಡುರೊ ನಂತರ ವೆನೆಝುವೆಲಾದಲ್ಲಿ ಉತ್ತರಾಧಿಕಾರಿ ಯಾರು?

ವೆನೆಝುವೆಲಾದ ಸಂವಿಧಾನದ ಪ್ರಕಾರ ಮಡುರೊ ನಂತರದ ಉತ್ತರಾಧಿಕಾರ ರೇಸ್‌ನಲ್ಲಿ ಮೊದಲ ಹೆಸರು ಡೆಲ್ಸಿ ರೊಡ್ರಿಗಸ್ ಅವರದ್ದು. ಅವರು 2018ರಿಂದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧಿಕಾರ ಸ್ವೀಕರಿಸಲು ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ.

ಮಡುರೊ ಅವರ ಬಲಗೈ ಎಂದು ಪರಿಗಣಿಸಲ್ಪಡುವ ಗೃಹ ಸಚಿವ ಡಿಯೋಸ್ಡಾಡೊ ಕ್ಯಾಬೆಲ್ಲೊ ಹಾಗೂ ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್‌ಗೆ ಹತ್ತಿರವಿದ್ದ ನಿವೃತ್ತ ಲೆಫ್ಟಿನೆಂಟ್ ಕ್ಯಾಬೆಲ್ಲೊ ಕೂಡ ಉತ್ತರಾಧಿಕಾರಿಯಾಗುವ ಅರ್ಹತೆ ಹೊಂದಿದ್ದಾರೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News