ಸಚಿನ್ ಪಾಂಚಾಳ ಆತ್ಮಹತ್ಯೆಯೋ? ಕೊಲೆಯೋ? ತನಿಖೆಯಾಗಲಿ : ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಆಗ್ರಹ
ಕಲಬುರಗಿ : ಬೀದರ್ ನ ಗುತ್ತಿಗೆದಾರ ಸಚಿನ್ ಪಾಂಚಾಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿರುವ ಪ್ರಕರಣ ಕುರಿತು ಸಿ.ಐ.ಡಿ. ತನಿಖೆಗೆ ಒಪ್ಪಿಸುವಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ವಿಠ್ಠಲ್ ದೊಡ್ಡಮನಿ ಸೇರಿದಂತೆ ಇತರ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡರು, ಕಂಪನಿಯೊಂದರಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಸಚಿನ್ ಪಂಚಾಳ ಅವರು ತನಗೆ ಕಿರುಕುಳ ನೀಡಿದ್ದಾರೆಂದು 8 ಜನರನ್ನು ಹೆಸರಿಸಿ ಡೆತ್ ನೋಟ್ ಬರೆದು ಫೆಸ್ ಬುಕ್ ಗೆ ಅಪ್ಲೋಡ್ ಮಾಡಿ ರೇಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖಕರ ಸಂಗತಿಯಾಗಿದ್ದು, ಡೆತ್ ನೋಟ್ ಬರೆದಿರುವುದು ಸೇರಿದಂತೆ ಈ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸಚಿನ್ ಪಂಚಾಳ ಅವರು, ತಮ್ಮ ಫೆಸ್ ಬುಕ್ ಖಾತೆಯಲ್ಲಿ ಡೆತ್ ನೋಟ್ ಅಪ್ಲೋಡ್ ಮಾಡಿದ್ದನ್ನು ನೋಡಿದ ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ರಾಜಕುಮಾರ ಕಪನೂರ ಅವರು, ಇದರ ಕುರಿತು ಯಾವುದೇ ಅನಾಹುತ ಆಗದಂತೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ನಗರ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಬಿಜೆಪಿಯವರು ಈ ಆತ್ಮಹತ್ಯೆ ಪ್ರಕರಣವನ್ನು ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಷಡ್ಯಂತ್ರ ಮಾಡುತ್ತಿದ್ದಾರೆಂದು ದೂರಿದರು.
ದಲಿತ ಮುಖಂಡ ಅರ್ಜುನ್ ಭದ್ರೆ ಮಾತನಾಡಿ, ಯಾವುದೋ ಒಂದು ಕೊಲೆ, ಆತ್ಮಹತ್ಯೆ, ಅತ್ಯಾಚಾರ ಪ್ರಕರಣಗಳು ನಡೆದರೆ, ಇಲ್ಲಿನ ಆಂದೋಲಾಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಬಿಜೆಪಿ ಮುಖಂಡರು, ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಈ ರೀತಿಯ ಸುಳ್ಳು ಹೇಳಿಕೊಂಡು ಖರ್ಗೆ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ಸರಿಯಲ್ಲ. ರಾಜಕೀಯ ಮಾಡುವುದಾದರೆ ಮೌಲ್ಯಾಧರಿತವಾಗಿ ಮಾಡಬೇಕು, ಸಂಬಂಧವಿಲ್ಲದೆ ಇರುವ ಘಟನೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎನ್ನುತ್ತಿರುವುದು ಸಮಿತಿ ಖಂಡಿಸುತ್ತದೆ ಎಂದು ಕಿಡಿಕಾರಿದರು.
ಸಮಿತಿಯ ಮುಖಂಡೆ ರೇಣುಕಾ ಸಿಂಗೆ ಮಾತನಾಡಿ, ಇಷ್ಟಕ್ಕೂ ಸಚಿನ್ ಬರೆದಿಟ್ಟ ಎನ್ನಲಾದ ಡೆತ್ ನೋಟ್ ಅವರದ್ದಾ? ಅಥವಾ ಯಾರೋ ಬರೆದಿರೋದಾ? ಮಾನಸಿಕವಾಗಿ ಕುಂದಿರೋ ವ್ಯಕ್ತಿ ಒಬ್ಬ ಹಿರಿಯ ಲೇಖಕ ಬರೆಯುವಂತೆ ಬರೆದಿರುವುದು ಬಹಳಷ್ಟು ಅನುಮಾನ ಮೂಡಿಸಿದೆ, ಈ ಪತ್ರದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಸಚಿನ್ ಪಂಚಾಳ ಮತ್ತು ರಾಜು ಕಪನೂರು ಅವರ ಮಧ್ಯೆ ವ್ಯವಹಾರ ಆಗಿದೆ, ಆದರೆ ರಾಜಕೀಯ ವ್ಯವಹಾರವಾಗಿಲ್ಲ. ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ, ಅದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಎ.ಬಿ. ಹೊಸಮನಿ, ಪ್ರಕಾಶ ಮೂಲಭಾರತಿ, ಶಾಂತಪ್ಪ ಕೂಡ್ಲಗಿ, ಮಲ್ಲಪ್ಪ ಹೊಸಮನಿ, ದಿನೇಶ ದೊಡ್ಮನಿ, ಹಣಮಂತರಾವ ದೊಡ್ಡಮನಿ, ಪವನಕುಮಾರ್ ಒಳಕೇರಿ, ಹಣಮಂತ ಬೋಧನಕರ್ ಸೇರಿದಂತೆ ಇತರರು ಇದ್ದರು.