×
Ad

ಕಲಬುರಗಿ | 2.5 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ: ಎ.ಎಸ್.ಪಾಟೀಲ್ ನಡಹಳ್ಳಿ ಆರೋಪ

Update: 2025-07-31 17:22 IST

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2.5 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿ ರೈತರಿಗೆ ಮೋಸಮಾಡಿದೆ ಎಂದು ಮಾಜಿ ಶಾಸಕ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಯಾ ಭೌಗೋಳಿಕ ಪ್ರದೇಶಗಳ ವಾತಾವರಣ, ಬೆಳೆಗಳಿಗೆ ತಕ್ಕಂತೆ ಗೊಬ್ಬರದ ಅವಶ್ಯಕತೆ ಇರುತ್ತದೆ. ಅವಶ್ಯಕತೆಗೆ ತಕ್ಕಂತೆ ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಸರಬರಾಜು ಮಾಡದೇ, ಬೇರೆ ಬೇರೆ ಕಂಪನಿಗಳಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಿ, ಇದೀಗ ಕೇಂದ್ರದೆಡೆ ಬೊಟ್ಟು ಮಾಡುತ್ತಿದೆ ಎಂದ ಅವರು, ಸಂಕಷ್ಟದಲ್ಲಿರುವ ನಾಡಿನ ರೈತರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.

ರಾಜ್ಯಾದ್ಯಂತ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಸಹಜವೇ ರೈತರಿಗೆ ಗೊಬ್ಬರದ ಅಗತ್ಯತೆ ಹೆಚ್ಚಾಗಿದೆ. ಇದನ್ನು ಅರಿತು ಕೃಷಿ ಸಚಿವ ಚೆಲುವರಾಯಸ್ವಾಮಿ ಯಾವುದೇ ಜಿಲ್ಲೆಗೆ ತೆರಳದೇ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸದೆ ಕೇವಲ ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಇತರೆಡೆ ಗೊಬ್ಬರದ ಅಗತ್ಯತೆ ಮತ್ತು ವಾಸ್ತವಾಂಶ ಅರಿಯಲು ಪ್ರಯತ್ನ ನಡೆಸಿಲ್ಲ. ಅಲ್ಲದೆ ರೈತರೊಂದಿಗೆ ಸಂವಾದ ನಡೆಸಿಲ್ಲ ಎಂದ ಅವರು, ಬಿತ್ತನೆಯ ಸಮಯದಲ್ಲಿ ಸಮರ್ಪಕವಾಗಿ ಬೀಜ ಗೊಬ್ಬರ ನೀಡಲು ಆಗದ ಚೆಲುವರಾಯಸ್ವಾಮಿ ಕೃಷಿ ಮಂತ್ರಿಯಾಗಲು ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತ ಸಮುದಾಯ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಈ ಹಿಂದೆ ರಾಜ್ಯದ ರೈತರಿಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಬಿ.ಎಸ್.ಯಡಿಯೂರಪ್ಪ ಅವರಿಂದ ರೈತರ ಸಂಕಷ್ಟ ಅರಿತು ರೈತರಿಗೆ ನೆರವಾಗುವ ಕೆಲಸವಾಗಿದೆ. ಸಿರಿ ಧಾನ್ಯಗಳಿಗೆ ಪ್ರತ್ಯೇಕ 10 ಸಾವಿರ ರೂ. ಪರಿಹಾರ ನೀಡಿದ ಬಿಜೆಪಿ ಸರ್ಕಾರದ ಯೋಜನೆ ಈಗ ಕಾಂಗ್ರೆಸ್ ನಿಲ್ಲಿಸಿದೆ. ಕೇಂದ್ರದ ಫಸಲ್ ಭೀಮಾ ಯೋಜನೆಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದ್ದು, ರಾಜ್ಯದಾದ್ಯಂತ ನಕಲಿ ಬೀಜದ ಹಾವಳಿ ಮೀತಿಮೀರಿದೆ ಎಂದು ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

ಸುದ್ದಿಗೋಷ್ಟಿ ಬಳಿಕ ನಗರದ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬಿಜೆಪಿ ಮುಖಂಡರನ್ನು ಒಳಗೊಂಡ ಬೃಹತ್ ರೈತ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಂಸದ ಡಾ.ಉಮೇಶ್ ಜಾಧವ್, ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅವ್ವಣ್ಣಾ ಮ್ಯಾಕೇರಿ, ಚಂದು ಪಾಟೀಲ್, ಅಮರನಾಥ ಪಾಟೀಲ್, ನಿತಿನ್ ಗುತ್ತೇದಾರ್, ಶರಣಪ್ಪ ತಳವಾರ, ಲಿಂಗರಾಜ ಬಿರಾದಾರ್,ಮಲ್ಲಣ್ಣ ಕುಲಕರ್ಣಿ, ಶ್ರೀಶೈಲ ಪಾಟೀಲ್,ಸಿದ್ದಾಜಿ ಪಾಟೀಲ್, ಶಿವರಾಜ್ ಪಾಟೀಲ್, ಸಂತೋಷ ಹಾದಿಮನಿ, ಸೂರ್ಯಕಾಂತ ಡೆಂಗಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News