×
Ad

ಕಲಬುರಗಿ | ಭಯ ಬಿಟ್ಟು ರಕ್ತದಾನ ಮಾಡಿ ಜೀವ ಉಳಿಸಿ : ಡಾ.ಶರಣಬಸಪ್ಪ ಗಣಜಲಖೇಡ್

Update: 2025-06-17 22:56 IST

ಕಲಬುರಗಿ: ಸಾಮಾಜಿಕ ಕಳಕಳಿಯುಳ್ಳ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಭಯ ಬಿಟ್ಟು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ನೆರವಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿಯ ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯದ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ್ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಮ್ಸ್ ಆಸ್ಪತ್ರೆ, ಜಿಲ್ಲೆಯ ರಕ್ತ ನಿಧಿ ಕೇಂದ್ರಗಳು, ರೆಡ್ ರಿಬ್ಬನ ಕ್ಲಬ್‌ಗಳು, ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್. ಘಟಕ, ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜಿಲ್ಲಾ ಸಮೀಕ್ಷಣಾ ಘಟಕದ ಬಳಿಯ ಜಿಲ್ಲಾ ಉಗ್ರಾಣ ಕೇಂದ್ರದ ಸಭಾ ಭವನದಲ್ಲಿ ಆಯೋಜಿಸಿದ ವಿಶ್ವ ರಕ್ತದಾನಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಕ್ತದಾನದ ಕುರಿತು ಜನರಲ್ಲಿನ ಭಯವನ್ನು ಹೋಗಲಾಡಿಸಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಜನರಿಗೆ ಹೆಚ್ಚಿನ ಅರಿವು ನೀಡುವ ಅವಶ್ಯಕತೆ ಇದೆ. “ರಕ್ತದಾನ” ದಾನಗಳಲ್ಲಿಯೆ ಶ್ರೇಷ್ಟವಾದದ್ದು. ಬೇರೆಯವರ ಜೀವ ಉಳಿಸಲು ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯಿಲ್ಲದೆ ರಕ್ತವನ್ನು ದಾನ ಮಾಡಬೇಕು. ಇದರಿಂದ ರಸ್ತೆ ಅಪಘಾತ, ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ತ್ರೀಯರು ಸೇರಿದಂತೆ ಮುಂತಾದ ರೋಗಿಗಳಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಶಾಬಾದಿ, ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೆಂದ್ರದ ವೈದ್ಯಾಧಿಕಾರಿ ಡಾ.ಮಮತಾ ಪಾಟೀಲ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಚಂದ್ರಕಾಂತ ನರಬೋಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಕಲಬುರಗಿಯ ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಲಯದ ಸಹ ನಿರ್ದೇಶಕ ಡಾ.ಶಂಕರಪ್ಪ ಮೈಲಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಗದು ಬಹುಮಾನ ವಿತರಣೆ :

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಗರದ 25ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಆಯೋಜಿಸಿದ ಭಾಷಣ ಸ್ಪರ್ಧೇಯಲ್ಲಿ ವಿಜೇತರಾದ ಕ್ರಮವಾಗಿ ಅಗ್ರ ಮೂವರಿಗೆ ರೇವಣಸಿದ್ದಪ್ಪ ಪೂಜಾರಿ 2,500 ರೂ., ಕಾವೇರಿ 1,500 ರೂ. ಹಾಗೂ ಅನಿತಾ 1,000 ರೂ. ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಇದಲ್ಲದೆ 20ಕ್ಕು ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ವಿಶೇಷ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಲಯದ ಉಪನಿರ್ದೇಶಕ ಡಾ.ಎ.ಎಸ್.ರುದ್ರವಾಡಿ, ಆರ್.ಸಿ.ಹೆಚ್.ಓ ಸಿದ್ದು ಪಾಟೀಲ್ ಸೇರಿದಂತೆ ಅನೇಕ ಆರೋಗ್ಯ ಇಲಾಖೆಯ ಅಧಿಕಾರಿಗಳು, ಎನ್.ಟಿ.ಪಿ ಸಿಬ್ಬಂದಿ, ಐ.ಸಿ.ಟಿ.ಸಿ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು, ರಶ್ಮಿ ಬಿ.ಎಡ್ ಕಾಲೇಜಿನ ಉಪನ್ಯಾಸಕರು-ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಬಿರಾದರ ಕಾರ್ಯಕ್ರಮ ನಿರೂಪಿಸಿದರು. ಐ.ಸಿ.ಟಿ.ಸಿ ಕೌನ್ಸಿಲರ್ ಸುಗಲಾ ರಾಣಿ ಅವರು ವಂದಿಸಿದರು.

ಜಾಥಾಗೆ ಚಾಲನೆ :

ಕಾರ್ಯಕ್ರಮಕ್ಕೂ ಮುನ್ನ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆಯಿಂದ ಕಾರ್ಯಕ್ರಮದ ಸ್ಥಳದವರೆಗೆ ಜರುಗಿದ ಜಾಥಾಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿಯ ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಲಯದ ಸಹ ನಿರ್ದೇಶಕ ಡಾ.ಶಂಕರಪ್ಪ ಮೈಲಾರಿ ಅವರು ಚಾಲನೆ ನೀಡಿದರು.

ಜಾಥಾದಲ್ಲಿ ನಸಿರ್ಂಗ್-ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು, ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News