×
Ad

ಕಲಬುರಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ

Update: 2025-12-08 19:23 IST

ಕಲಬುರಗಿ: ಸುಟ್ಟ ವಿದ್ಯುತ್‌ ಪರಿವರ್ತಕಗಳನ್ನು(ಟಿ.ಸಿ) ನಿಗದಿತ ಕಾಲಮಿತಿಯಲ್ಲಿ ಬದಲಾಯಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಜೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರಾತ್ರಿ ಸಮಯದಲ್ಲಿ ತ್ರಿಫೇಸ್‌ ವಿದ್ಯುತ್‌ ಪೂರೈಸುವ ಬದಲು ಹಗಲು ಹೊತ್ತಿನಲ್ಲಿ 12 ಗಂಟೆ ವಿದ್ಯುತ್‌ ಕೊಡಬೇಕು, ಸುಟ್ಟ ವಿದ್ಯುತ್‌ ಟಿ.ಸಿ.ಗಳನ್ನು 24 ಗಂಟೆಗಳಲ್ಲಿ ಬದಲಾಯಿಸಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಲೋಡ್ ಹೆಚ್ಚಳದಿಂದ ಪದೇ ಪದೇ ಟಿಸಿಗಳು ಸುಡುವುದನ್ನು ತಪ್ಪಿಸಲು ಹೆಚ್ಚುವರಿ ಟಿಸಿಗಳನ್ನು ಅಳವಡಿಸಬೇಕು, ಕೃಷಿ ಪಂಪ್‌ ಸೆಟ್ ಗಳಿಗೆ ಸ್ಮಾರ್ಟ್ ಮೀಟ‌ರ್ ಅಳವಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು, ವಿದ್ಯುತ್ ಖಾಸಗೀಕರಣ ಮಸೂದೆ ಹಿಂಪಡೆಯಬೇಕು, ರೈತರ ಹೊಲಗಳಲ್ಲಿ ಜೋತು ಬಿದ್ದ ತಂತಿ ಬಿಗಿಯಬೇಕು, ಬಾಗಿದ ಹಾಗೂ ಶಿಥಿಲಗೊಂಡ ಕಂಬಗಳ ದುರಸ್ತಿಗೆ ಕ್ರಮವಹಿಸಬೇಕು, ಬೆಳೆಗಳಲಿದ್ದ ಟಿ.ಸಿ.ಗಳ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ಸ್ಥಳಕ್ಕೆ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಬಂದು ರೈತರ ಮನವಿಯನ್ನು ಸ್ವೀಕರಿಸಿದರು.

ಬಳಿಕ ಮಾತನಾಡಿದ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್, ಟಿಸಿಗಳ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆಗಳನ್ನು ವ್ಯವಸ್ಥಾಪಕರ ಜೊತೆ ಮಾತನಾಡಿ ಕ್ರಮ ವಹಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಕಲಶೆಟ್ಟಿ, ದಿಲೀಪ್‌ ನಾಗೂರೆ, ಬಾಬು ಮೇಳಕುಂದಿ, ಸಾಯಬಣ್ಣ ಕೊರಬಾ ಸೇರಿದಂತೆ ಇತರ ರೈತರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News