×
Ad

ಕಲಬುರಗಿ | ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅಕ್ರಮ ಸಾಬೀತು: ಪಿಡಿಓ ರಾಚಣ್ಣಗೌಡ ಅಮಾನತು

Update: 2025-04-23 21:19 IST

ಕಲಬುರಗಿ : ಆಳಂದ ತಾಲೂಕಿನಲ್ಲಿ ಮಂಜೂರಾದ 467 ತೆರೆದ ಬಾವಿಗಳಲ್ಲಿ ಹಾಳ ತಡಕಲ್ ಗ್ರಾಮದ ಮನರೇಗಾ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈಗ ಪಿಡಿಓರನ್ನು ಅಮಾನತು ಮಾಡಲಾಗಿದೆ.

ಇದಕ್ಕೆ ಪುಷ್ಠಿ ಎನ್ನುವಂತೆ ಈಗ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಹಾಳ ತಡಕಲ್ ಗ್ರಾಮ ಪಂಚಾಯತ್‍ನ ಪ್ರಭಾರಿ ಅಭಿವೃದ್ಧಿ ಅಧಿಕಾರಿ ರಾಚಣ್ಣಗೌಡ ಅವರನ್ನು ಅಮಾನತ್ತು ಆದೇಶ ಹೊರಡಿಸಿರುವ ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ಅವರು, ಅಕ್ರಮ ಎಸಗಿದ ಮೊತ್ತವೂ ಸರ್ಕಾರಕ್ಕೆ ಪಾವತಿಸುವಂತೆ ಸೂಚಿಸಿದ್ದಾರೆ.

ಗುತ್ತೇದಾರ ದೂರು :

ಮನರೇಗಾ ಯೋಜನೆಯಲ್ಲಿ ತಾಲೂಕಿಗೆ 467 ತೆರೆದಬಾವಿಗಳು ಮಂಜೂರಾಗಿದ್ದವು. ಮನರೇಗಾ ಮಾರ್ಗಸೂಚಿಯನ್ವಯ ಕಾಮಗಾರಿ ನಡೆದಿಲ್ಲ ಹಾಗೂ ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆಯ ಆಯುಕ್ತರಿಗೆ ಹಾಗೂ ಸರ್ಕಾರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವರಿಗೆ ದಾಖಲೆ ಸಮೇತ ದೂರು ನೀಡಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಜಿಪಂ ಸಿಇಒ ಅವರು ಚಿತ್ತಾಪೂರ ಮತ್ತು ಅಫಜಲಪೂರ ತಾಲೂಕಿನ ಅಧಿಕಾರಿಗಳ ತಂಡವನ್ನು ನೇಮಿಸಿ ಪರಿಶೀಲನೆ ನಡೆಸಿದ್ದರು.

ತಂಡದ ಪರಿಶೀಲನೆ ಬಳಿಕ ನೀಡಿದ ವರದಿಯಲ್ಲಿ ಸ್ಪಷ್ಟ ನಿಮಾವಳಿಗಳು ಉಲ್ಲಂಘಿಸಿದ್ದು ಕಂಡಬಂದಿದೆ ಹಾಗೂ ಸರ್ಕಾರದ ಭೋಕ್ಕಸಕ್ಕೆ ಹಾನಿಮಾಡಿರುವುದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಹಾಳತಡಕಲ್ ಪ್ರಭಾರಿ ಪಿಡಿಓ ಅವರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ.

ಪ್ರಕರಣ ಬೆಳಕಿಗೆ :

ಆಳಂದ ತಾಲೂಕಿನ ಹಾಳತಡಕಲ್, ಕಡಗಂಚಿ, ಮತ್ತು ಮಾದನಹಿಪ್ಪರಗಾ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (mnarega) ಅಡಿಯಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಗಳಲ್ಲಿ ಗಂಭೀರ ಅವ್ಯವಹಾರಗಳು ಬೆಳಕಿಗೆ ಬಂದಿವೆ.

ಜೆಸಿಬಿ ಯಂತ್ರಗಳ ಬಳಕೆ, ವಿದೇಶದಲ್ಲಿರುವ ವ್ಯಕ್ತಿಗಳು, ಮಹಾರಾಷ್ಟ್ರದ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವವರ ಹೆಸರನ್ನು ಸೇರಿಸಿ ಸುಳ್ಳು ಓಒಖ ಗಳನ್ನು ಸೃಜಿಸಿ, ಲಕ್ಷಾಂತರ ರೂಪಾಯಿಗಳ ಹೆಚ್ಚುವರಿ ಕೂಲಿ ಮೊತ್ತವನ್ನು ಪಾವತಿಸಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.

ಅವ್ಯವಹಾರದ ವಿವರಗಳು :

ಸರ್ವೆ ಸಂಖ್ಯೆ ದೋಷ :

ಹಾಳತಡಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂ. 122 ರಲ್ಲಿ ಕಾಮಗಾರಿ ನಡೆಸಬೇಕಿದ್ದರೂ, ಸರ್ವೆ ನಂ. 123 ರಲ್ಲಿ ಕಾಮಗಾರಿ ಅನುಷ್ಠಾನಗೊಂಡಿದೆ. ಇದರಿಂದ ಭೌತಿಕ ಕಾಮಗಾರಿಗಿಂತ 79,911 ರೂ. ಹೆಚ್ಚುವರಿ ಕೂಲಿ ಮೊತ್ತ ಪಾವತಿಯಾಗಿದೆ.

ನಸೀರವಾಡಿ ಗ್ರಾಮದಲ್ಲಿ ಅವ್ಯವಹಾರ: 

ಬಬ್ರುವಾಹನ ಪಾಟೀಲರ ಹೊಲದಲ್ಲಿ ತೆರೆದ ಬಾವಿ ಕಾಮಗಾರಿಯಲ್ಲಿ ಭೌತಿಕ ಕಾಮಗಾರಿಗಿಂತ 21,846 ರೂ. ಹೆಚ್ಚುವರಿ ಕೂಲಿ ಮೊತ್ತ ಪಾವತಿಯಾಗಿದೆ.

ಸುಳ್ಳು ಜಾಬ್ ಕಾರ್ಡ್‍ಗಳು :

ವಿದೇಶದಲ್ಲಿರುವ ವ್ಯಕ್ತಿಗಳು, ಮಹಾರಾಷ್ಟ್ರದ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವವರ ಹೆಸರನ್ನು ಕೂಲಿಕಾರರೆಂದು ಸೇರಿಸಿ ಸುಳ್ಳು ಜಾಬ್ ಕಾರ್ಡ್ ಗಳನ್ನು ಸೃಜಿಸಲಾಗಿದೆ. ನಸೀರವಾಡಿ ಗ್ರಾಮದಲ್ಲಿ 128 ಜಾಬ್‍ಕಾರ್ಡ್‍ಗಳು ಒಬ್ಬರೇ ಸದಸ್ಯರ ಹೆಸರಿನಲ್ಲಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ.

ಹಾಳತಡಕಲ್ ಗ್ರಾಮದಲ್ಲಿ ಮರಣ ಹೊಂದಿದ ಫಲಾನುಭವಿಯ ಹೆಸರಿನಲ್ಲಿ ಕಾಮಗಾರಿಗೆ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ವಸೂಲಾತಿ: ಒಟ್ಟು ರೂ. 1,01,757 ವಸೂಲಾತಿಗೆ ಆದೇಶಿಸಲಾಗಿದೆ.

ಎಲ್ಲಾ ಕಾಮಗಾರಿಗಳಿಗೆ ತಡೆ ನೀಡಬೇಕು :

ಮನರೇಗಾ ಕಾಮಗಾರಿಯಲ್ಲಿ ಈಗಾಗಲೇ ಆರೋಪ ಸಾಬೀತಾಗಿದ್ದರಿಂದ ಎಲ್ಲಾ ಗ್ರಾಪಂಗಳಲ್ಲಿ ನಡೆಯುತ್ತಿರುವ ತೆರೆದ ಬಾವಿಯ ಕಾಮಗಾರಿಗಳನ್ನು ತಡೆಹಿಡಿಯಬೇಕು. ಕಾಮಗಾರಿ ಮೊತ್ತ ಪಾವತಿಸುವುದನ್ನು ನಿಲ್ಲಿಸಬೇಕು. ಇದೇ ರೀತಿ ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ಜೆಸಿಬಿ ಹಾಗೂ ಇಟಾಚಿ ಯಂತ್ರಗಳನ್ನು ಬಳಸಿ ಮನರೇಗಾ ಕಾಮಗಾರಿ ಲೂಟಿ ಮಾಡಲಾಗಿದೆ. ಕಾಮಗಾರಿ ನಿಲ್ಲಸದೇ ಇದ್ದರೇ ಜಿಪಂ ಕಚೇರಿಯ ಮುಂದೆ ಸಾವಿರಾರು ಕೂಲಿ ಕಾರ್ಮಿಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು.

-ಸುಭಾಷ್‌ ಗುತ್ತೇದಾರ (ಮಾಜಿ ಶಾಸಕರು ಆಳಂದ)


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News