ಕಲಬುರಗಿ | ರಾಜ್ಯದಲ್ಲಿ ಒಳಮೀಸಲಾತಿ ತ್ವರಿತ ಜಾರಿಗೆ ಹಣಮಂತಪ್ಪ ಆಲ್ಕೋಡ್ ಆಗ್ರಹ
ಕಲಬುರಗಿ : ಸಂವಿಧಾನ ಬದ್ಧವಾಗಿ ಪರಿಶಿಷ್ಟರಾಗಿರುವರಿಗೆ ಸಿಗಬೇಕಾಗಿರುವ ಒಳಮೀಸಲಾತಿಯನ್ನು ಕೂಡಲೇ ರಾಜ್ಯ ಸರ್ಕಾರ ಜಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಆದಿಜಾಂಭವ ಸಂಘದ ರಾಜ್ಯಾಧ್ಯಕ್ಷ ಹಣಮಂತಪ್ಪ ಆಲ್ಕೂಡ್ ಅವರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಆದಿಜಾಂಭವ ಸಂಘದ ವತಿಯಿಂದ ನಗರದ ಸೂಪರ್ ಮಾರ್ಕೆಟ್‍ನಲ್ಲಿನ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯ ರಘೋಜಿ ಸಂಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ʼಸಂವಿಧಾನ ಜಾಗೃತ ಸಮಾವೇಶ ಮತ್ತು ಒಳಮೀಸಲಾತಿ ಜಾರಿ ಕುರಿತು ಹಕ್ಕೊತ್ತಾಯ ಕಾರ್ಯಕ್ರಮʼ ಉದ್ಘಾಟಿಸಿ ಮಾತನಾಡಿದರು.
ಒಳಮೀಸಲಾತಿಯು ಮಾದಿಗ ಸಮುದಾಯದ ನ್ಯಾಯಯುತ ಬೇಡಿಕೆಯಾಗಿದ್ದು, ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೆ ಮುಂದಾಗಬೇಕು. ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುವ ಮೂಲಕ ಸಂವಿಧಾನ ಬಹುಮುಖ್ಯ ಆಶಯವಾಗಿರುವ ಸಮಾನತೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಮಾದಿಗ ಸಮುದಾಯಕ್ಕೆ ಶೇ.6.75 ಮೀಸಲಾತಿಯನ್ನು ತಕ್ಷಣ ಜಾರಿ ಮಾಡುವಂತೆ, ಒಳ ಮೀಸಲಾತಿ ಜಾರಿಗೆ ಮಾಡುವರೆಗೆ ಸರ್ಕಾರ ಎಲ್ಲ ನೌಕರರ ಹುದ್ದೆಗಳು ಮತ್ತು ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಬಾರದು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬೀದರ್ ನ ಸಮಾಜದ ಮುಖಂಡ ರಾಜು ಕಡ್ಯಾಳ್ ಅವರು ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸರ್ವೋಚ್ಛ ನ್ಯಾಯಾಲಯದ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದು, ಹಲವಾರು ರಾಜ್ಯಗಳು ಈಗಾಗಲೇ ಕೋರ್ಟ್ ಆದೇಶ ಪಾಲನೆ ಮಾಡಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಸ್ಟಿಸ್ ನಾಗಮೋಹನ್ ದಾಸ್ ಅವರ ಏಕ ಸದಸ್ಯ ಪೀಠ ರಚಿಸಿ ಉದ್ದೇಶಪೂರಕವಾಗಿ ಕಾಲಹರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ/ವರ್ಗದವರಿಗೆ ಸರ್ಕಾರ ವಿವಿಧ ಯೋಜನೆಗಳಲ್ಲಿ ಮಂಜೂರು ಮಾಡಿರುವ ಜಮೀನುಗಳು ಮತ್ತು ತೋಟ, ಇನಾಂ, ನೀರಗಂಟಿ, ಜಿಎಂಎಫ್ ಯೋಜನೆಯಡಿ ಹಾಗೂ ಮುಂತಾದ ಜಮೀನುಗಳನ್ನು ಒಳಗೊಂಡಂತೆ 1978ರ ಪಿಟಿಸಿಎಲ್ ಕಾಯಿದೆಗೆ ಸಮಗ್ರ ತಿದ್ದುಪಡಿ ತರಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಮಾದಿಗ ಸಮಾಜದ ಮುಖಂಡ ಅಂಬಾರಾಯ್ ಚಲಗೇರಿ ಅವರು ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪಂಜಾಬ್ ತೆಲಂಗಾಣ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಾರಂಭದಲ್ಲಿ ಸಮಾಜದ ಮುಖಂಡರಾದ ಜಂಭೂದ್ವೀಪ್ ಸಿದ್ದರಾಜ್, ರೇವಣ್ಣ ಯಮಕಚ್ಚಿ, ರಮೇಶ್, ನಾಗೇಶ್ ಎ.ಎಚ್, ವೆಂಕಟೇಶ್, ಹಣಮಂತಪ್ಪ ಮುದ್ದಾಪೂರ್, ಮಲ್ಲೇಶಪ್ಪ ದಿಟ್ಟಗಿ, ಗಣೇಶ್ ಮುದ್ದಪ್ಪ, ಅನೀಲ್, ಪರಶುರಾಮ್ ರೋಣಿಹಾಳ್, ಧರ್ಮಣ್ಣಾ ನಾಟೀಕರ್, ಚಂದ್ರಕಾಂತ್ ನಾಟೀಕರ್, ಮರೆಪ್ಪ ಕಿರಗಿಕರ್, ಹುಸನಪ್ಪ ಹೆಚ್, ಸತೀಶ್ ಅಳ್ಳೋಳಿ, ರಾಜು ಹದನೂರ್, ಶರಣು ಸಗರ್, ಗುಂಡಪ್ಪ ಶಿರಡೋಣ್, ಮಲ್ಲು ಕೊಡಂಪಳ್ಳಿ ಮುಂತಾದವರು ಭಾಗವಹಿಸಿದ್ದರು.