×
Ad

ಕಲಬುರಗಿ | ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತಿ ಆಚರಣೆ

Update: 2025-01-03 16:53 IST

ಕಲಬುರಗಿ : ಮಾನವ ಬಂಧುತ್ವ ವೇದಿಕೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ನಗರದ ಆದರ್ಶ ನಗರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಕ್ಷರದವ್ವ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲೆ ಪ್ರತಿಮಾ ದೇವುರ ನೆರವೇರಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅನಿಲ ಟೆಂಗಳಿ ಮಾತನಾಡಿ, ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಕ್ರಾಂತಿಯ ಫಲವಾಗಿ ಇಂದು ಭಾರತ ದೇಶದ ಸರ್ವ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಯುವ ಹಕ್ಕು ದೊರೆತಿದೆ. ಬಂದಿಯಾದ ಅಕ್ಷರಗಳನ್ನು ಬಿಡುಗಡೆಗೊಳಿಸಿ ಅಂಧಕಾರದಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನು ಶಿಕ್ಷಣ ನೀಡುವ ಮೂಲಕ ಬೆಳಕನ್ನು ನೀಡಿದರು ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಹೋರಾಟಗಾರ ಸುನಿಲ್ ಮಾನಪಡೆ, 'ಮಾನವ ಬಂಧುತ್ವ ವೇದಿಕೆ ಕಳೆದ ಹತ್ತು ವರ್ಷಗಳಿಂದ ಸಮಾಜದಲ್ಲಿ ಇರುವ ಮೂಢನಂಬಿಕೆ ಕಂದಾಚಾರ ವಿರುದ್ಧ ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಾ, ಬುದ್ಧ, ಬಸವ ಅಂಬೇಡ್ಕರ್ ಕನಕದಾಸರು, ಅಂಬಿಗರ ಚೌಡಯ್ಯರು, ಅಕ್ಕಮಹಾದೇವಿ, ಜ್ಯೋತಿಬಾ ಫುಲೆ ದಂಪತಿಗಳು ಮೊದಲಾದ ಸಾಮಾಜಿಕ ಸುಧಾರಕರ ಆದರ್ಶಗಳನ್ನು ಪ್ರಚಾರ ಮಾಡಿ ಸಮಾಜವನ್ನು ವೈಚಾರಿಕ ವೈಜ್ಞಾನಿಕ ಮನೋಭಾವ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಸಮ ಸಮಾಜದ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದೆ' ಎಂದರು.

ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಮಲ್ಲಪ್ಪ ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬನಶಂಕರಿ, ನರಸಪ್ಪ ರಂಗೋಲಿ, ಭಾರತಿ ಪಾಂಡವಿ, ಸುರಾಚಂದ ಗಾಂಧಿ, ಜಗದೇವಿ, ಲೀಲಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿಠ್ಠಲ ಬಾವಿಮಾನಿ ನಿರೂಪಿಸಿದರೆ, ನಾಗೇಂದ್ರ ಜವಳಿ ಅವರು ವಂದಿಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News