×
Ad

ಕಲಬುರಗಿ | ಕಸಾಪ ದಿಂದ ಮಹಿಳಾ ಚಿತ್ರಕಲಾ ಪ್ರದರ್ಶನ

Update: 2024-11-29 22:58 IST

ಕಲಬುರಗಿ : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಕನ್ನಡ ಭವನದಲ್ಲಿನ ಕಲಾ ಸೌಧದಲ್ಲಿ ಶುಕ್ರವಾರದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಮಹಿಳಾ ಕಲಾವಿದರ ಕಲಾ ಕುಂಚದಲ್ಲಿ ಅರಳಿದ ಬದುಕು, ಬವಣೆ, ವಿಡಂಬನೆ, ಪರಿಸರ ಕಾಳಜಿ, ಅತ್ಯಾಚಾರ, ಭಾರತೀಯ ಸಂಸ್ಕೃತಿ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸುಮಾರು ಮೂವತ್ತಕ್ಕೂ ಹೆಚ್ಚು ಕಲಾವಿದರ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಲಾ ಸೌಧ ಬೆರಗು ಮೂಡಿಸುವ ಬಣ್ಣದ ಲೋಕವೇ ನಿರ್ಮಾಣವಾಗಿತ್ತು. ಇದು ಪ್ರೇಕ್ಷಕರ ವಿಶೇಷ ಗಮನವೂ ಸೆಳೆಯಿತು.

ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ಮಹಿಳೆ ಸಮಾಜಮುಖಿಯಾಗಿ ತೊಡಗಿಸಿಕೊಂಡರೆ ಏನೆಲ್ಲ ಸಾಧನೆ ಮಾಡಬಲ್ಲಳು. ಬಹುಮುಖ ಪ್ರತಿಭೆಯ ಮಹಿಳೆಯರಿಂದ ಅಭಿವೃದ್ಧಿ ಖಂಡಿತಾ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಕ್ತ ಅವಕಾಶ ನೀಡಿ ಗೌರವಿಸಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪ್ರಕೃತಿ ಎಂಬುದು ನಮಗೆ ಪ್ರಥಮ ಗುರು. ಪ್ರಕೃತಿಯಿಂದ ಎಲ್ಲಾ ಸಾಹಿತ್ಯ, ಕಥೆ, ಕವನ, ಚಿತ್ರಕಲೆಗಳು ಸೃಷ್ಟಿಯಾಗುತ್ತವೆ. ನಿಸರ್ಗ ಇಲ್ಲದೆ ನಾವುಗಳಿಲ್ಲ. ಹಾಗಾಗಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಚಿತ್ರಕಲಾವಿದರು ತಮ್ಮ ಚಿತ್ರಕಲೆಯ ಮೂಲಕ ಆ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದ ಚಿತ್ರಕಲಾವಿದರಿಗಾಗಿ ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ತು ಸದಾ ಬೆಂಬಲವಾಗಿ ನಿಲ್ಲುತ್ತದೆ. ಪ್ರತಿಭಾವಂತರಿಗೆ ಪ್ರೋತ್ಸಾಹಿಸುವ ಕಾರ್ಯವೂ ಸಹ ಮಾಡಲಾಗುತ್ತಿದೆ ಎಂದರು.

ಹಿರಿಯ ಸಾಹಿತಿ ಡಾ. ಪರಿಮಳಾ ಅಂಬೇಕರ್, ಡಾ. ಅಮೃತಾ ಸ್ವಾತಿ, ಮಹ್ಮದ್ ಅಯಾಜೋದ್ದೀನ್ ಪಟೇಲ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಕಲಾ ಸೌಧ ದ ಸಂಚಾಲಕ ಡಾ. ರೆಹಮಾನ್ ಪಟೇಲ್, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಶಿಲ್ಪಾ ಜೋಶಿ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ವಿನೋದ ಜೇನವೇರಿ, ಬಸವರಾಜ ಉಪ್ಪಿನ್, ನಾಗಪ್ಪ ಸಜ್ಜನ್, ವೀರೇಂದ್ರಕುಮಾರ ಕೊಲ್ಲೂರ, ಶ್ರೀಕಾಂತ ಪಾಟೀಲ ತಿಳಗೂಳ, ಮಹ್ಮದ್ ಇಬ್ರಾಹಿಂ ಕುಪನೂರ, ಗೋಪಾಲ ಕುಲಕರ್ಣಿ, ರಾಜಶೇಖರ ಶ್ಯಾಮಣ್ಣ, ಶಾಹೇದ್ ಪಾಶಾ, ಡಾ. ಬಸವರಾಜ ಜಾನೆ, ಮಂಜುಳಾ ಜಾನೆ, ಡಾ. ಎಸ್ ಎಂ ನೀಲಾ, ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News