×
Ad

ಕಲಬುರಗಿ: ಜೈಲಿನಲ್ಲಿ ದುಡಿದ ಹಣದಿಂದ ಬಂಧಮುಕ್ತನಾದ ಕೈದಿ!

Update: 2025-02-05 20:58 IST

ಕಲಬುರಗಿ: ಸನ್ನಡತೆಯ ಆಧಾರದ ಮೇಲೆ ಕೋರ್ಟ್ ಬಿಡುಗಡೆಯ ಆದೇಶ ನೀಡಿದರೂ ದಂಡದ ಹಣ ಕಟ್ಟಲು ಸಾಧ್ಯವಾಗದೇ ಜೈಲಿನಲ್ಲೇ ಉಳಿದಿದ್ದ ಕೈದಿ ಕೊನೆಗೆ ತಾನು ಜೈಲಿನಲ್ಲಿ ದುಡಿದ ಹಣದಿಂದ ಬಂಧಮುಕ್ತನಾಗಿರುವ ಅಪರೂಪದ ಘಟನೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಜಂತಾಪುರ ಗ್ರಾಮದ ದುರ್ಗಪ್ಪ (65) ಎಂಬವರೇ ಜೈಲಿನ ಅಧಿಕಾರಿ ಆರ್.ಅನಿತಾ ಅವರ ಸಹಾಯದಿಂದ ಬಿಡುಗಡೆಯಾಗಿ ಸಂಬಂಧಿಕರ ಮನೆ ಸೇರಿಕೊಂಡಿರುವ ಕೈದಿಯಾಗಿದ್ದಾರೆ.

ದುರ್ಗಪ್ಪ 2012ರಲ್ಲಿ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2013ರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು. ಜೊತೆಗೆ ರೂ. 1.10 ಲಕ್ಷವನ್ನು ದಂಡವಾಗಿ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ದಂಡದ ಹಣ ಕಟ್ಟದಿದ್ದರೆ ಒಂದು ವರ್ಷ ಆರು ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿತ್ತು.

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ದುರ್ಗಪ್ಪನಿಗೆ 2024ರಲ್ಲಿ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೆ ಆದೇಶ ಪ್ರಕಟವಾಗುತ್ತದೆ. ಬಿಡುಗಡೆಯಾದ ದುರ್ಗಪ್ಪನಿಗೆ ಸಂಬಂಧಿಕರು ಇದ್ದರೂ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಪರಿಹಾರದ ಹಣ ನೀಡಲು ಮುಂದಾಗಿರುವುದಿಲ್ಲ ಎಂದು ತಿಳಿದುಬಂದಿದೆ.

ದುರ್ಗಪ್ಪ ಕಾರಾಗೃಹದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಖಾತೆಯಲ್ಲಿ ಜೈಲಿನಲ್ಲಿ ಕೆಲಸ ಮಾಡಿದ ಕೂಲಿ ಮೊತ್ತ ಹಾಗೂ ಉಳಿತಾಯದ ಹಣ ರೂ. 2.80 ಲಕ್ಷದಷ್ಟಿರುವುದನ್ನು ಜೈಲು ಅಧಿಕಾರಿ ಆರ್. ಅನಿತಾ ಅವರು ಗಮನಕ್ಕೆ ಬಂದಿದೆ. ಆದರೆ, ಬೇರೆ ಕಡೆ ಬ್ಯಾಂಕ್ ಖಾತೆಯಲ್ಲಿದ್ದುದರಿಂದ ಅದನ್ನು ಡ್ರಾ ಮಾಡುವುದು ಕಷ್ಟವಾಗಿತ್ತು. ಈ ಕುರಿತಾಗಿ ಆ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿದ ಅಧಿಕಾರಿ ಅನಿತಾ ಅವರು, ದುರ್ಗಪ್ಪನೊಂದಿಗೆ ತಮ್ಮ ಸಿಬ್ಬಂದಿಯನ್ನು ಕಳಿಸಿ ಹಣವನ್ನು ಡ್ರಾ ಮಾಡಿಸಿ ರೂ. 1.10 ಲಕ್ಷ ದಂಡದ ಹಣವನ್ನು ಬ್ಯಾಂಕ್ ಮೂಲಕ ಪಾವತಿಸಲು ಸೂಚಿಸಿದ್ದಾರೆ. ಬ್ಯಾಂಕಿನಲ್ಲಿ ದಂಡ ಪಾವತಿಸಿದ ಬಳಿಕ ದುರ್ಗಪ್ಪನಿಗೆ ಬಿಡುಗಡೆಯ ಆದೇಶ ಪ್ರಕಟವಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News