×
Ad

ಬ್ರಾಹ್ಮಣ್ಯ, ಬಂಡವಾಳಶಾಹಿಗಳಿಂದ ಸಂವಿಧಾನದ ಆಶಯಕ್ಕೆ ಧಕ್ಕೆ : ಶಿವಸುಂದರ್

Update: 2025-05-24 18:02 IST

ರಾಯಚೂರು : ದೇಶದಲ್ಲಿ ಅಸಮಾನತೆ ತಾಂಡವಾಡುತ್ತಿದ್ದು, ಬ್ರಾಹ್ಮಣ್ಯಶಾಹಿ ಹಾಗೂ ಬಂಡವಾಳಶಾಹಿಗಳ ಹಿಡಿತಕ್ಕೆ ಸಿಕ್ಕಿ ನಲುಗುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿದೆ ಎಂದು ಚಿಂತಕ ಶಿವಸುಂದರ್ ಕಳವಳ ವ್ಯಕ್ತಪಡಿಸಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶನಿವಾರ ‘ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಹಾಗೂ ಸಮಾನ ಮನಸ್ಕ ಸಂಘಟನೆಗಳ’ ವತಿಯಿಂದ ಹಮ್ಮಿಕೊಂಡಿದ್ದ ವರ್ತಮಾನ ಸಂದರ್ಭದ ರಾಜಕಾರಣ ತತ್ವ ಸಿದ್ದಾಂತಗಳ ಮನನ, ಚಿಂತನ ಮಂಥನ ಕಾರ್ಯಕ್ರಮದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಬಯಸಿದ್ದ ಸಂವಿಧಾನ’ ವಿಷಯದ ಕುರಿತು ವಿಚಾರ ಮಂಡಿಸಿದರು.

ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗವು ಯಾವುದೇ ಪ್ರಭಾವಕ್ಕೆ ಒಳಗಾಗದ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಒಂದು ಅಂಗ ಮತ್ತೊಂದು ಅಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ಈಗ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಮೇಲೆ ಶಾಸಕಾಂಗ ಹಸ್ತಕ್ಷೇಪ ಮಾಡುವ ಯತ್ನ ನಡೆಯುತ್ತಿದೆ ಎಂದರು.

ಪ್ರಜಾಸತ್ತಾತ್ಮಕ, ಗಣರಾಜ್ಯ ಪರಿಕಲ್ಪನೆಯನ್ನು ಕೇಂದ್ರದಲ್ಲಿನ ಬಲಿಷ್ಠ ಸರಕಾರ ಬುಡಮೇಲು ಮಾಡಲು ಯತ್ನಿಸುತ್ತಿದೆ. ಸಾಂವಿಧಾನಿಕ ಸಂಸ್ಥೆಗಳಿಗೆ ತಮ್ಮದೇ ಆದ ಸ್ವಾಯತ್ತ ಸ್ವಾತಂತ್ರ್ಯವಿದೆ. ಆದರೆ ಕೇಂದ್ರ ಸರಕಾರ ಅದನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರಕಾರಗಳ ಮೇಲೆ ಸವಾರಿ ಮಾಡುತ್ತಿದೆ ಎಂದು ದೂರಿದರು.

ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿದರು.

ಹೋರಾಟಗಾರ ಚಂದ್ರಶೇಖರ ಬಾಳೆ, ರವಿ ಪಾಟೀಲ್ ಫೌಂಡೇಷನ್ ಅಧ್ಯಕ್ಷ ರವಿ ಪಾಟೀಲ್, ಚಂದ್ರಗೀರೀಶ, ಜನಾಂದೋಲನ ಕೇಂದ್ರದ ಗೌರವಾಧ್ಯಕ್ಷೆ ಶಾರದಾ ಹುಲಿನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಸವರಾಜ, ಪ್ರದೇಶ ಅಧ್ಯಕ್ಷ ಖಾಜಾ ಅಸ್ಲಂ, ಬೂದೆಪ್ಪ ಕರ್ಲಿ, ಶಾಮಲಾ ಪೂಜಾರ, ಸಮದ್, ಜಾನ್‌ವೆಸ್ಲಿ, ಚನ್ನಬಸವ ಜಾನೇಕಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News