×
Ad

Raichuru | ವೇತನ ಕಡಿತ, ದೌರ್ಜನ್ಯದ ಆರೋಪ; ರಿಮ್ಸ್ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

Update: 2026-03-05 10:32 IST

ರಾಯಚೂರು: ಗುತ್ತಿಗೆ ಸಂಸ್ಥೆಯು ವೇತನ ಕಡಿತಗೊಳಿಸಿ ಪಿಎಫ್, ಎಸ್ ಐ ಹಣವನ್ನು ಸರಿಯಾಗಿ ಜಮಾ ಮಾಡದೇ ಡಿ ಗ್ರೂಪ್ ನೌಕರರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ರಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಗುರುವಾರ ಬೆಳಗ್ಗೆ ಕೆಲಸಕ್ಕೆ ಗೈರಾಗಿ ಆಸ್ಪತ್ರೆಯ ಆವರಣದ ಮುಂದೆ ಪ್ರತಿಭಟನೆ ನಡೆಸಿದರು.

ಮೈಸೂರು ಮೂಲದ ಸ್ವಿಸ್ ಎಂಬ ಗುತ್ತಿಗೆ ಸಂಸ್ಥೆ ಡಿ ಗ್ರೂಪ್ ನೌಕರರಿಗೆ ಮಾನಸಿಕ ಹಿಂಸೆ ನೀಡುತ್ತಿದೆ, ಪ್ರತೀ ತಿಂಗಳು ವೇತನ ಪಾವತಿಸದೆ, ಮೂರ್ನಾಲ್ಕು ತಿಂಗಳಿಗೆ ವೇತನ ಜಮಾ ಮಾಡಲಾಗುತ್ತಿದೆ ಎಂದು ದೂರಿದರು.

ಎರಡು ತಿಂಗಳ ವೇತನ ಬಾಕಿ ಇಟ್ಟು ಇತ್ತೀಚೆಗೆ ವೇತನ ಪಾವತಿ ಮಾಡಿದ್ದು ಅನೇಕರಿಗೆ 3-5 ಸಾವಿರ ರೂ. ವರೆಗೆ ವೇತನ ಕಡಿತಗೊಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ "ಸಮವಸ್ತ್ರ ಬದಲಾವಣೆಗೆ ಕಡಿತಗೊಳಿಸಿದ್ದೇವೆ'' ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದ್ದು, ಅದರಲ್ಲೂ ಸಮವಸ್ತ್ರದ ಹೆಸರಿನಲ್ಲಿ ಐದು ಸಾವಿರ ರೂ. ಕಡಿತಗೊಳಿಸಿದರೆ ಕುಟುಂಬ ನಿರ್ವಹಣೆ ಮಾಡುವುದಾದರು ಹೇಗೆ ಎಂದು ಏಜೆನ್ಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ರಿಮ್ಸ್) ಬೋಧಕ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಲು ಸಿಬ್ಬಂದಿಯ ಕೊರತೆ ಇದೆ. ಮೂವರ ಕೆಲಸ ಒಬ್ಬರೇ ಮಾಡಬೇಕಿದೆ, ಗುತ್ತಿಗೆ ಸಂಸ್ಥೆಯವರು ಗೌರವಯುತವಾಗಿ ನಡೆದುಕೊಳ್ಳದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಆನಂದ, ಪ್ರಶಾಂತ, ರಮೇಶ, ಸಂದೀಪ್, ನರೇಶ, ಮಲ್ಲಿಕಾರ್ಜುನ, ವಿನೋದ, ಅನುರಾಧಾ, ಸುನೀತಾ, ಪುಷ್ಪಾ, ಈರಮ್ಮ, ಶ್ರೀನಿವಾಸ, ಅಮರಮ್ಮ, ವಿಶ್ವನಾಥ, ನವೀನ ಕುಮಾರ್ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News