×
Ad

ಮಾದಕ ವಸ್ತುಗಳ ಸೇವನೆಯಲ್ಲಿ ಹೆಣ್ಣುಮಕ್ಕಳೇ ಹೆಚ್ಚು: ಡಾ. ಭಗವಾನ್ ಬಿ.ಸಿ.

ರಾಯಚೂರು: ನಶಾಮುಕ್ತ ಅಭಿಯಾನ

Update: 2026-03-06 20:47 IST

ರಾಯಚೂರು: ಯುವಜನರಲ್ಲಿ ಮಾದಕ ವಸ್ತುಗಳ ಸೇವನೆ ಅಧಿಕವಾಗುತ್ತಿದೆ. ದೇಶದಲ್ಲಿ ಶೇ 30ಕ್ಕೂ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಅವರಲ್ಲಿ ಹೆಣ್ಣುಮಕ್ಕಳೇ ಹೆಚ್ಚಿರುವುದು ಆತಂಕಕಾರಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ತಿಳಿಸಿದರು.

ಶುಕ್ರವಾರ, ರಾಯಚೂರು ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದೊಂದಿಗೆ ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ “ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ”, “ಯುವ ಶುದ್ದಿ ಅಭಿಯಾನ” “ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್” ಹಾಗೂ ಅಂಗಾಂಗ ದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ದೇಶದ ಬಹುದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾದ ನಮ್ಮ ಸಂಸ್ಥೆಯ ಅಡಿಯಲ್ಲಿ ಸುಮಾರು 1500 ಶಿಕ್ಷಣ ಸಂಸ್ಥೆಗಳು ಸಂಯೋಜನೆಗೊಂಡಿವೆ. ಒಟ್ಟು 3.5 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಾರೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು, ಕೇವಲ ತರಗತಿ, ಬೋಧನೆ, ಪರೀಕ್ಷೆ, ಫಲಿತಾಂಶಕ್ಕಷ್ಟೇ ಸೀಮಿತವಾದರೆ ಸಾಲದು. ಆರೋಗ್ಯವಂತ, ಸ್ವಸ್ಥ, ಮಾನವೀಯ ಗುಣಗಳ ಆರೋಗ್ಯ ವೃತ್ತಿಪರರನ್ನು ಬೆಳೆಸಬೇಕು ಎನ್ನುವುದು ನಮ್ಮ ವಿಶ್ವವಿದ್ಯಾಲಯದ ಧ್ಯೇಯ. ಅದಕ್ಕಾಗಿ ಈ ದೃಢವಾದ ಹೆಜ್ಜೆಯನ್ನಿಟ್ಟೀದ್ದೇವೆ ಎಂದರು.

ನಶಾಮುಕ್ತ ನಾಡು ಕಟ್ಟುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವಾಗ್ದಾನದ ಭಾಗವಾಗಿ ನಾವಿಂದು ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ನೆಲೆಯಾದ ರಾಯಚೂರಿಗೆ ಬಂದಿದ್ದೇವೆ.

ಗದಗ, ಕೊಪ್ಪಳ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ, ಕೊಡಗು, ಹಾಸನ, ವಿಜಯಪುರ, ಬೆಳಗಾವಿ ಸೇರಿದಂತೆ 12 ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ 450ಕ್ಕೂ ಅಧಿಕ ಸಂಸ್ಥೆಗಳು ಭಾಗಿಯಾಗಿವೆ. ಸುಮಾರು 67 ಸಾವಿರ ವಿದ್ಯಾರ್ಥಿಗಳು ಈ ಜಾಗೃತಿ ನಡಿಗೆಗೆ ಸಾಕ್ಷಿಯಾಗಿದ್ದಾರೆ. ನಮ್ಮ ಇಂದಿನ ಹೆಜ್ಜೆ ಐತಿಹಾಸಿಕ ಭೂಮಿಯಾದ ರಾಯಚೂರು ತಲುಪಿದೆ.

ರಾಯಚೂರು ಶ್ರಮಜೀವಿಗಳ ನೆಲೆ, ಯುವಶಕ್ತಿಯ ಬೀಡು. ಆದರೆ ಇಂತಹ ಮಹತ್ವದ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಯುವಜನತೆಯ ಆರೋಗ್ಯ ಮತ್ತು ಭವಿಷ್ಯವನ್ನು ಹಾಳುಮಾಡುತ್ತಿದೆ. ತಂಬಾಕು, ಮದ್ಯಪಾನ, ಗಾಂಜಾ, ಡ್ರಗ್ಸ್ ಸೇರಿದಂತೆ ಅನೇಕ ವ್ಯಸನಗಳು ವಿದ್ಯಾರ್ಥಿಗಳ ಏಳಿಗೆಗೆ, ಭವಿಷ್ಯಕ್ಕೆ ಅಡ್ಡಿಯಾಗುತ್ತಿವೆ. ಇದನ್ನು ತಡೆಯಲು ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

ಪಂಜಾಬ್, ಕೇರಳ ಸೇರಿದಂತೆ ಉತ್ತರ ಭಾಗದ ರಾಜ್ಯಗಳ ನಂತರ ಇದೀಗ ಡ್ರಗ್ ಪೆಡ್ಲರ್ ಗಳ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ರಾಯಚೂರಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಆತಂಕದ ಛಾಯೆ ಆವರಿಸಿದೆ. ರಾಯಚೂರನ್ನು ನಶಾಮುಕ್ತ ಜಿಲ್ಲೆಯನ್ನಾಗಿ ಮಾಡಲು ನಿಮ್ಮೆಲ್ಲರ ಬೆಂಬಲ-ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.

ರಾಯಚೂರು ಜಿಲ್ಲೆ ಆರೋಗ್ಯ, ಶಿಕ್ಷಣ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಬೇಕಾದರೆ, ಮೊದಲಿಗೆ ವ್ಯಸನ ಮುಕ್ತವಾಗಬೇಕು. ನಶಾಮುಕ್ತ-ಸ್ವಸ್ಥ-ಆರೋಗ್ಯಕರ ರಾಯಚೂರು ಜಿಲ್ಲೆಯನ್ನು ಕಟ್ಟಲು ಇಂದೇ ಸಂಪಲ್ಪ ಮಾಡಬೇಕು ಎಂದು ತಿಳಿಸಿದರು.

ನಮ್ಮ ದಿಟ್ಟ ನಡೆ

ನಮ್ಮ ವಿಶ್ವವಿದ್ಯಾಲಯದಿಂದ ಮುನ್ನಡೆಯುತ್ತಿರುವ ಮತ್ತೊಂದು ಅರ್ಥಪೂರ್ಣ ಅಭಿಯಾನ ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನ. ಅಂಗಾಂಗ ಕಸಿ ನಿರೀಕ್ಷೆಯಲ್ಲಿರುವ ರೋಗಿಗಳು ಹಾಗೂ ಅಂಗಾಂಗ ದಾನದ ಪ್ರಮಾಣದ ನಡುವೆ ದೊಡ್ಡ ಅಂತರವಿದೆ. ದೇಶದಲ್ಲಿ ಲಕ್ಷಾಂತರ ರೋಗಿಗಳು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ, ಅವರಿಗೆ ಲಭ್ಯವಾಗುತ್ತಿರುವ ಅಂಗಾಂಗಗಳು ಮಾತ್ರ ಸಾವಿರ ಸಂಖ್ಯೆ ದಾಟುತ್ತಿಲ್ಲ. ಈ ಅಂತರವನ್ನು ತುಂಬಲು ನಮ್ಮ ವಿಶ್ವವಿದ್ಯಾಲಯದಿಂದ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 58 ಸಾವಿರ ಅಂಗಾಂಗ ದಾನಗಳು ನಡೆದಿವೆ. ಈವರೆಗೆ ನಮ್ಮ ವಿಶ್ವವಿದ್ಯಾಲಯದಿಂದ ಸುಮಾರು 10 ಸಾವಿರದಷ್ಟು ಅಂಗಾಂಗ ದಾನ ಪ್ರತಿಜ್ಞೆಗಳು ನಡೆದಿವೆ.

ಇದು ಸಣ್ಣ ಸಂಖ್ಯೆ ಏನಲ್ಲ. ನಮ್ಮ ಪ್ರಯತ್ನಕ್ಕೆ ದೊರೆತ ಅತ್ಯುತ್ತಮ ಪ್ರತಿಫಲವಾಗಿದೆ. ಮುಂದಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಈ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ನಮ್ಮದಾಗಿದೆ.

- ಡಾ. ಭಗವಾನ್ ಬಿ.ಸಿ.

-ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಜಿಲ್ಲೆಯಲ್ಲಿ ವ್ಯಸನಮುಕ್ತಿ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ನಿತೀಶ್ ಕೆ.

ರಾಯಚೂರು ಗಡಿ ಜಿಲ್ಲೆಯಾಗಿರುವ ಕಾರಣ ಹೊರರಾಜ್ಯಗಳಿಂದ ಮಾದಕ ವಸ್ತುಗಳು ಸುಲಭವಾಗಿ ಬರುತ್ತವೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ಪ್ರಮಾಣ ಹೆಚ್ಚು. ಆದರೆ, ನಮ್ಮ ಜಿಲ್ಲೆಯಲ್ಲಿ ವ್ಯಸನಮುಕ್ತಿ ಕೇಂದ್ರಗಳೇ ಇಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದರು.

ಅನೇಕ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಕೊಳಚೆ ಪ್ರದೇಶಗಳಲ್ಲಿ ಗಾಂಜಾ, ಗುಟಕಾ ಸೇವನೆ ಅಧಿಕ. ಇಂತಹ ರಾಯಚೂರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಕಾರ್ಯ ಶ್ಲಾಘನೀಯ ಎಂದರು.

ಮಾದಕ ವಸ್ತು ಸೇವನೆ ಅಥವಾ ಮಾರಾಟದಂತಹ ಕೃತ್ಯಗಳು ಕಂಡುಬಂದರೆ ಯಾರೂ ಸಹ ಸುಮ್ಮನೇ ಇರಬೇಡಿ. ತಕ್ಷಣ ಜಿಲ್ಲಾ ಆಡಳಿತ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ. ಇದರಿಂದ ನಮ್ಮ ಜಿಲ್ಲೆಯಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ʼಹೆಚ್ಚುತ್ತಿದೆ ವ್ಯಸನʼ

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿದೆ. ಇಂತಹ ವ್ಯಸನಕ್ಕೆ ಬಲಿಯಾಗುವವರಲ್ಲಿ 30 ವರ್ಷದೊಳಗಿನ ಮೆಡಿಕಲ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅರುಣಾಂಗ್ಶು ಗಿರಿ ಹೇಳಿದರು.

ಆರೋಗ್ಯ ವೃತ್ತಿಪರರು ಹಾಗೂ ಎಂಜಿಯರಿಂಗ್ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದುಶ್ಚಟಗಳಿಗೆ ಈಡಾಗುತ್ತಿದ್ದಾರೆ. ರಾತ್ರಿ ಹೊತ್ತು ವಿವಿಧ ಹಾಸ್ಟೆಲ್ ಗಳಿಂದ ಹೊರಬಂದು ಗಾಂಜಾ ಸೇವನೆಯಲ್ಲಿ ತೊಡಗುತ್ತಾರೆ ಎನ್ನುವ ಮಾಹಿತಿಗಳು ನಮಗೆ ಬರುತ್ತವೆ.

ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟದ ಪ್ರಕರಣ ದಾಖಲಾದರೆ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತದೆ. ಕಾನೂನು ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಸಹವಾಸದಿಂದ ದೂರ ಇರಬೇಕು ಎಂದು ಅವರು ಸಲಹೆ ನೀಡಿದರು.

ದೇಹವನ್ನು ಮಣ್ಣು ಮಾಡಬೇಡಿ, ದಾನ ಮಾಡಿ:  ಶ್ರೀಸುಬುಧೇಂದ್ರ ತೀರ್ಥರು

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ, ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ನಮ್ಮ ಮನಸು, ದೇಹ, ಆರೋಗ್ಯವನ್ನು ಸ್ವಸ್ಥವಾಗಿ-ಸ್ವಚ್ಚವಾಗಿ ಇಟ್ಟುಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.

ತಾತ್ಕಾಲಿಕ ಸುಖಕ್ಕಾಗಿ ಶಾಶ್ವತ ದುಃಖಕ್ಕೆ ಆಹ್ವಾನ ನೀಡಬಾರದು. ವೈದ್ಯಕೀಯ-ಆರೋಗ್ಯ ವೃತ್ತಿಪರರಾದ ನೀವು ಆರೋಗ್ಯಕರ ಸಮಾಜವನ್ನು ಮುನ್ನಡೆಸಲು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.

ದೇಹವನ್ನು ಮಣ್ಣು ಮಾಡುವ ಬದಲು ದಾನ ಮಾಡಿ. ಒಬ್ಬರ ಅಂಗಾಂಗಗಳು ಎಂಟು ಜನರ ಬದುಕಿಗೆ ಬೆಳಕಾಗಬಹುದು. ಬದುಕಿದ್ದಾಗಲೂ-ಸಾವಿನ ನಂತರವೂ ಈ ದೇಹ ಪರೋಪಕಾರಕ್ಕೆ ನಿದರ್ಶನವಾಗಬೇಕು ಎಂದು ಅವರು ಸಲಹೆ ನೀಡಿದರು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಿಕಾಸ್ ಸಿಂಗ್ ಹಾಗೂ ದಿಶಾಬೋಧ್ ಫೌಂಡೇಶನ್ ಅರ್ಪಣಾ ಮಾತನಾಡಿದರು. ರಿಮ್ಸ್ ನ ಡೀನ್ ಹಾಗೂ ನಿರ್ದೇಶಕರಾದ ಡಾ. ರಮೇಶ್ ಬಿ.ಹೆಚ್., ನವೋದಯ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಶ್ರೀ ಎಸ್. ಆರ್. ರೆಡ್ಡಿ, ಪ್ರಾಚಾರ್ಯರಾದ ಡಾ. ದೇವಾನಂದ್, ಶಿಲ್ಪಾ ಮೆಡಿಕೇರ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಷ್ಣುಕಾಂತ್ ಭೂಟಾಡಾ, ಎಎಂಇ ಡೆಂಟಲ್ ಕಾಲೇಜು ಪ್ರಾಚಾರ್ಯ ಡಾ. ಶಿವಾನಂದ ಅಸ್ಪಳ್ಳಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಎಸ್.ಪಿ. ಪರೇಡ್ ಮೈದಾನದಿಂದ ಆರಂಭವಾದ ವಾಕಥಾನ್ ಗಂಜ್ ವೃತ್ತ, ಗಾಂಧಿ ಚೌಕ್, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಗಾಂಧಿ ಸ್ಟೇಡಿಯಂನಲ್ಲಿ ಕೊನೆಗೊಂಡಿತು. ಸುಮಾರು 4000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.










 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News