ರಾಜ್ಯ ಬಜೆಟ್ ನಲ್ಲಿ ರಾಯಚೂರು ಜಿಲ್ಲೆಗೆ ಸಿಕ್ಕಿದ್ದೇನು?
ಹೊಸ ತಾಲೂಕುಗಳಿಗೆ ನಿರಾಸೆ, ಎಐ ಬಲವರ್ಧನೆಗೆ ಒತ್ತು
ರಾಯಚೂರಿನ ಹೊರವಲಯದ ಜಿಲ್ಲಾಡಳಿತ ಭವನ
ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಗೆ ನಿರೀಕ್ಷಿತ ಯೋಜನೆಗಳು ಘೋಷಣೆಯಾಗಿಲ್ಲ. ರಾಯಚೂರು ನಗರದ ರಿಂಗ್ ರೋಡ್‌ಗೆ ಅನುದಾನ, ರಾಯಚೂರು ತಾಲೂಕಿನ ಯರಗೇರಾ, ಗಿಲ್ಲೆಸುಗೂರು, ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ, ಮುದಗಲ್, ಮಾನ್ವಿಯ ಕವಿತಾಳ ಗ್ರಾಮ, ಹೋಬಳಿಗಳನ್ನು ತಾಲೂಕುಗಳಾಗಿ ಘೊಷಣೆ ಮಾಡುವ ಭರವಸೆ ಹುಸಿಯಾಗಿದೆ. ಹೊಸ ವಿವಿಗಳಲ್ಲಿ ಒಂದಾದ ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿಗೆ ಅನುದಾನ, ಕೃಷ್ಣ-ತುಂಗಭದ್ರಾ ನದಿಗಳ ಆಧುನೀಕರಣ ಕಾಮಗಾರಿ, ಗ್ರಾಮೀಣ ರಸ್ತೆಗಳ ಸುಧಾರಣೆ, ಕೆಎಸ್‌ಆರ್‌ಪಿ ಘಟಕ ಸ್ಥಾಪನೆ, ಸಿಂಧನೂರು ತಾಲೂಕನ್ನು ಜಿಲ್ಲೆಯಾಗಿ ಘೊಷಣೆ ಸೇರಿ ಅನೇಕ ಬೇಡಿಕೆಗಳಿಗೆ ಮನ್ನಣೆ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅದಾಗ್ಯೂ, ನೂತನ ಮಹಾನಗರ ಪಾಲಿಕೆಗೆ 200 ಕೋಟಿ, ಐಐಐಟಿನಲ್ಲಿ ಎಐ ಶ್ರೇಷ್ಠತಾ ಕೇಂದ್ರ ಸ್ಥಾಪನೆ ಹಾಗೂ ಇನ್ನಿತರ ಕೆಲವು ಘೋಷಣೆಗಳು ತಕ್ಕ ಮಟ್ಟಿಗೆ ಸಮಾಧಾನ ತಂದಿದೆ.
ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಘೊಷಣೆಯಾದ ರಾಯಚೂರು ಮಹಾನಗರ ಪಾಲಿಕೆಗೆ ಕಳೆದ ವರ್ಷ ಘೊಷಿಸಿದ್ದ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಗೆ ರೂ.200 ಕೋಟಿ ಅನುದಾನ ನೀಡಿದ್ದು ಮೂಲಸೌಕರ್ಯ ಒದಗಿಸಲು ಅನುಕೂಲವಾಗಿದೆ. ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಚಾಲನೆ, ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಬಲವರ್ಧನೆಗೆ ರಾಯಚೂರು ನಗರದ ಹೊರವಲಯದ ಯರಮರಸ್ ಕ್ಯಾಂಪ್‌ನಲ್ಲಿರುವ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯಲ್ಲಿ ಕೃತಕ ಬುದ್ಧಿ ಮತ್ತೆ (ಎಐ) ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ಘೋಷಣೆ ಮಾಡಿ ರೂ. 5 ಕೋಟಿ ಅನುದಾನ ನೀಡಿದೆ.
ಮಸ್ಕಿಗೆ ಕ್ರೀಡಾಂಗಣ, ಪದವಿಪೂರ್ವ ಕಾಲೇಜು: ನೂತನ ತಾಲೂಕು ಮಸ್ಕಿ, ಸಿರವಾರ ತಾಲೂಕಿಗೆ ಬಿಇಒ ಕಚೇರಿ, ತಾಲೂಕು ಆಸ್ಪತ್ರೆ ಸೇರಿ ಅನೇಕ ಪೂರ್ಣ ಪ್ರಮಾಣದ ಕಚೇರಿಗಳಿಲ್ಲ. ಈಗಲೂ ಅಖಂಡ ಮಾನ್ವಿ, ಸಿಂಧನೂರು ತಾಲೂಕುಗಳ ಮೇಲೆ ಅವಲಂಬನೆಯಾಗಿದೆ. ಆದರೆ ಮಸ್ಕಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ರೂ.2 ಕೋಟಿ, ಬಳಗಾನೂರಿಗೆ ಪದವಿ ಕಾಲೇಜು, ಶ್ರಮಿಕ ವಸತಿ ಶಾಲೆ ಘೋಷಣೆ ಮಾಡಿದೆ.
ಆದರೆ ಸಿರವಾರ ತಾಲೂಕಿಗೆ ಯಾವುದೇ ಘೋಷಣೆಯಾಗಿಲ್ಲ.
ಹಳೆಯ ಯೋಜನೆಗಳ ಮರುಘೋಷಣೆ: ಕಲ್ಮಲಾ-ಸಿಂಧನೂರು ರಸ್ತೆ, ಮಹಾನಗರ ಪಾಲಿಕೆಯ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ, ಕೆರೆ ತುಂಬುವ ಯೋಜನೆ, ನಗರದ ಓಪೆಕ್‌ನ ಟ್ರಾಮ ಸೆಂಟರ್ ಇವು ಹಳೆಯ ಯೋಜನೆಗಳು ಹಾಗೂ ಪ್ರಸ್ತುತ ಕಾಮಗಾರಿಯೂ ನಡೆಯುತ್ತಿದೆ ಆದರೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಕಲ್ಮಲಾ-ಸಿಂಧನೂರು ರಸ್ತೆಯ ಒಟ್ಟು 77 ಕಿ.ಮೀ ಪೈಕಿ 60 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದು, ಬಾಕಿ ಉಳಿದಿರುವ 17 ಕಿ.ಮೀ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಲಾಗಿದೆ.
ಆರೋಗ್ಯ, ಶಿಕ್ಷಣ, ನೀರಾವರಿಗೆ ಆದ್ಯತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸಲು ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ‘ವಸತಿಯುತ ಪ್ರಥಮ ದರ್ಜೆ ಕಾಲೇಜು’ ನಿರ್ಮಾಣ, ನಗರದ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆ, ರಾಯಚೂರಿನ 18, ದೇವದುರ್ಗದ 14 ಕೆರೆಗಳನ್ನು ತುಂಬಿಸಲು ಯೋಜನೆ, ಮದ್ಲಾಪೂರ ಏತ ನೀರಾವರಿ ಮಾನ್ವಿಯ ದದ್ದಲ್ ಬಳಿ ಏತ ನೀರಾವರಿ, ಜಿಲ್ಲೆಯ ಸಣ್ಣ ನೀರಾವರಿ ಕಾಮಗಾರಿಗಳಿಗೆ ಅನುದಾನ, ಮಸ್ಕಿಯ ಜಾಲವಾಡಗಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ, ಮಾನ್ವಿಯ ಜೀನೂರು-ಉದ್ಭಾಳ ಏತ ನೀರಾವರಿ, ರಾಯಚೂರು ತಾಲೂಕಿನ ಅಡವಿಖಾನಾಪುರ ಗ್ರಾಮದಲ್ಲಿ ತುಂಗಭದ್ರಾ ಏತ ನೀರಾವರಿ ಯೋಜನೆ ಘೋಷಣೆ ಮಾಡಲಾಗಿದೆ.
ಕೇಂದ್ರ ಸರಕಾರ ತೆರಿಗೆ ಪಾಲು ನೀಡಲು ಅನ್ಯಾಯ, 15ನೇ ಹಣಕಾಸು ಯೋಜನೆಯಡಿ ತಾರತಮ್ಯದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಸಮತೋಲನ, ಸರಿದೂಗಿಸುವ ಬಜೆಟ್ ಮಂಡಿಸಿದ್ದಾರೆ. ಅಲ್ಪಸಂಖ್ಯಾತರ ಸಮುದಾಯಕ್ಕೆ ಶಿಕ್ಷಣ, ಕೌಶಲ್ಯ, ಹಿಂದುಳಿದ ವರ್ಗಗಳ ಮಡಿವಾಲ, ಸವಿತಾ ಸಮುದಾಯಕ್ಕೆ ವೃತ್ತಿ ಕೌಶಲ್ಯಕ್ಕೆ ಪ್ರಾದ್ಯಾನತೆ ನೀಡಿ ಅಹಿಂದ ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ.
-ವಸಂತ ಕುಮಾರ, ವಿಧಾನಪರಿಷತ್ ಸದಸ್ಯ ರಾಯಚೂರು
ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ, ಹಳೆಯ ಯೋಜನೆಗಳನ್ನೇ ಮರು ಘೋಷಣೆ ಮಾಡಿದ್ದಾರೆ. ರಾಯಚೂರಿನ ವರ್ತುಲ ರಸ್ತೆ ಸೇರಿ ಯಾವುದೇ ಯೋಜನೆಗೆ ಅನುದಾನ ನೀಡಿಲ್ಲ, ಸಾಲದ ಪ್ರಮಾಣ ಏರಿಕೆಯಾಗಿದ್ದು ಹಿಂದೆ ಮಾಡಿದ ಎಲ್ಲಾ ಮುಖ್ಯಮಂತ್ರಿಗಳ ಸಾಲವನ್ನು ಒಬ್ಬರೇ ಸಿದ್ದರಾಮಯ್ಯ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಜಿಲ್ಲೆಗೂ ರಾಜ್ಯಕ್ಕೂ ಶೂನ್ಯ ಕೊಡುಗೆ.
-ಡಾ.ಶಿವರಾಜ ಪಾಟೀಲ, ರಾಯಚೂರು ನಗರ ಶಾಸಕ
ರಾಯಚೂರು ಮಹಾನಗರ ಪಾಲಿಕೆಗೆ 200 ಕೋಟಿ ರೂ. ಅನುದಾನ, ಐಐಐಟಿ ರಾಯಚೂರಿನಲ್ಲಿ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಒತ್ತು ನೀಡಲಾಗಿದೆ. ರಾಜ್ಯ ಬಜೆಟ್ ‘ಪ್ರಾದೇಶಿಕ ಅಭಿವೃದ್ಧಿಯ ದೂರದೃಷ್ಟಿಯ ನೀಲನಕ್ಷೆ
-ಎನ್.ಎಸ್. ಭೋಸರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ