ರಾಯಚೂರು | ಮಾ.6ರಂದು ನಶಾಮುಕ್ತ ಭಾರತ್–ಯುವ ಶುದ್ಧಿ ಅಭಿಯಾನ ವಾಕಥಾನ್
ರಾಯಚೂರು : ರಾಯಚೂರು ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳ ಸಂಘ, ದಿಶಾಬೋಧ್ ಫೌಂಡೇಶನ್ ಹಾಗೂ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಇವರ ಸಹಯೋಗದಲ್ಲಿ “ನಶಾಮುಕ್ತ ಭಾರತ್–ಯುವ ಶುದ್ಧಿ ಅಭಿಯಾನ” ಅಂಗವಾಗಿ ವಾಕಥಾನ್ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಮಾರ್ಚ್ 6ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಿರ್ದೇಶಕ ಡಾ. ರಮೇಶ್ ಬಿ.ಹೆಚ್ ತಿಳಿಸಿದ್ದಾರೆ.
ನಗರದ ರಿಮ್ಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30ಕ್ಕೆ ಎಸ್‌ಪಿ ಫರೇಡ್ ಮೈದಾನದಿಂದ ಜಾಥಾ ಆರಂಭವಾಗಿ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಲಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸೇರಿದಂತೆ ಹಲವು ಸಂಸ್ಥೆಗಳ ಸಹಕಾರದಿಂದ ನಡೆಯುವ ಈ ವಾಕಥಾನದಲ್ಲಿ ಅಂದಾಜು 5,000 ಮಂದಿ ಭಾಗವಹಿಸಲಿದ್ದಾರೆ.
ಈ ಅಭಿಯಾನವು ಯುವಜನರನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ರಕ್ಷಿಸಿ, ಜವಾಬ್ದಾರಿಯುತ ಮತ್ತು ಮೌಲ್ಯಾಧಾರಿತ ಕ್ಯಾಂಪಸ್‌ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ರಾಷ್ಟ್ರವ್ಯಾಪಿ ಚಳವಳಿಯಾಗಿ ಆರಂಭವಾದ ಈ ಉಪಕ್ರಮಕ್ಕೆ 10 ಕೇಂದ್ರ ಸಚಿವಾಲಯಗಳು ಹಾಗೂ ರಾಜ್ಯ ಕಾನೂನು ಜಾರಿಗೊಳಿಸುವ ಸಂಸ್ಥೆಗಳ ಸಹಕಾರವೂ ಇದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಅವರ ಮಾರ್ಗದರ್ಶನದಲ್ಲಿ ಚಳವಳಿ ಮುಂದುವರಿಯುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ದೃಢತೆ ಹೊಂದಿದ ಕ್ಯಾಂಪಸ್‌ಗಳನ್ನು ನಿರ್ಮಿಸುವುದು ಉದ್ದೇಶವಾಗಿದೆ. ಇದುವರೆಗೆ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಈ ಚಳವಳಿಯಲ್ಲಿ ಭಾಗಿಯಾಗಿದ್ದಾರೆ.
ರಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಸುಶ್ರಿತ್ ಮಾತನಾಡಿ, “ಅಂಗದಾನ ಕ್ಯಾಂಪಸ್” ಪರಿಕಲ್ಪನೆಯನ್ನು ಉತ್ತೇಜಿಸಿ ಅಂಗದಾನದ ಮಹತ್ವದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದಿಶಾಬೋಧ್ ಫೌಂಡೇಶನ್ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಯುವಜನರಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮಾದಕ ವಸ್ತು ರಹಿತ, ಜವಾಬ್ದಾರಿಯುತ ಮತ್ತು ರಾಷ್ಟ್ರಭಕ್ತ ಯುವ ಚಳವಳಿಯನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನವೋದಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಾನಂದ, ಹೃದ್ರೋಗ ತಜ್ಞರು ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಭಾರಿ ವಿಶೇಷಾಧಿಕಾರಿ ಡಾ. ಮುರಳಿ ರಾವ್, ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ರೆಡ್ಡಿ, ನವೋದಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಕಟ್ಟಿ, ಶಿವಂ ನರ್ಸಿಂಗ್ ಕಾಲೇಜಿನ ಅಡಳಿತಾಧಿಕಾರಿ ರವಿ ಪಾಟೀಲ್, ನಂದಿನಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಸುಮಲತಾ, ಸ್‌ಎಎಮ್‌ಇಎಸ್ ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಸೇರಿದಂತೆ ಇತರರು ಇದ್ದರು.