×
Ad

ರಾಯಚೂರು | ಜನಗಣತಿ 2027: ಮೂರು ದಿನಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ

Update: 2026-03-04 20:13 IST

ರಾಯಚೂರು : ಜನಗಣತಿ-2027 ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವು ಮಾರ್ಚ್ 4ರಂದು ಆರಂಭವಾಯಿತು.

ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ ಚಾಲನೆ ನೀಡಿ ಮಾತನಾಡಿ, ಈ ಜನಗಣತಿಯು ಡಿಜಿಟಲ್ ಮಾದರಿಯಲ್ಲಿ ನಡೆಯಲಿದೆ. ಪ್ರಶ್ನಾವಳಿಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ತಕ್ಷಣ ಪರಿಹರಿಸಿಕೊಳ್ಳಬೇಕು. ಸಂವಿಧಾನಬದ್ಧ ಕರ್ತವ್ಯವೆಂದು ಭಾವಿಸಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಯನುಸಾರ ಜನಗಣತಿ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಕರ್ನಾಟಕದಲ್ಲಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ನೀಡುವ ಮಾರ್ಗಸೂಚಿಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮಗ್ರವಾಗಿ ಅರ್ಥೈಸಿಕೊಂಡು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜನಗಣತಿಯ ಹಿನ್ನೆಲೆ, ಪ್ರಕ್ರಿಯೆ, ವಿಧಾನಗಳು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯಗಳ ಕುರಿತು ತರಬೇತಿಯಲ್ಲಿ ಸಮಗ್ರವಾಗಿ ವಿವರಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಲಿಂಗಸೂರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ. ಬಡಿಗೇರ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯ ಸಹಾಯಕ ನಿರ್ದೇಶಕ ಬಸವರಾಜ ನಾಗರಬೆಂಚಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಐಎಎಸ್ ಪ್ರೋಬೇಷನರಿ ಹಾಗೂ ತಹಸೀಲ್ದಾರರಾದ ಪುರುರಾಜ್ ಸಿಂಗ್ ಸೋಲಂಕಿ ಅವರು ಸ್ವಾಗತಿಸಿದರು. ಶಿರಸ್ತೇದಾರ ಸೂಗುರೇಶ ದೇಸಾಯಿ ನಿರೂಪಿಸಿದರು. ತರಬೇತಿಯಲ್ಲಿ ಸಿಂಧನೂರ, ಮಾನವಿ, ಮಸ್ಕಿ, ಲಿಂಗಸಗೂರು, ದೇವದುರ್ಗ ಹಾಗೂ ಅರಕೇರಾ ತಹಸೀಲ್ದಾರರು, ದೇವದುರ್ಗ, ಮುದಗಲ್, ಲಿಂಗಸೂರ, ಮಾನವಿ ಮತ್ತು ಮಸ್ಕಿ ಪುರಸಭೆಗಳ ಮತ್ತು ತುರವಿಹಾಳ, ಹಟ್ಟಿ, ಬಳಗಾನೂರ, ಸಿರವಾರ, ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿಷಯ ನಿರ್ವಾಹಕರು ಹಾಗೂ ತಾಂತ್ರಿಕ ಸಹಾಯಕರು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News