×
Ad

ರಾಯಚೂರು | ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಸಮಸ್ಯೆ ಪರಿಹಾರಕ್ಕೆ ಸಿಪಿಐಎಂಎಲ್ ಲಿಬರೇಶನ್ ಒತ್ತಾಯ

Update: 2026-03-06 17:08 IST

ರಾಯಚೂರು: ಜಿಲ್ಲೆ ಸೇರಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಔಷಧಿ ಕೊರತೆ ಸಮಸ್ಯೆಯನ್ನು ತುರ್ತು ಕ್ರಮ ಕೈಗೊಂಡು ಪರಿಹರಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂಎಲ್) ಲಿಬರೇಶನ್ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಜನಸಾಮಾನ್ಯರ ಆರೋಗ್ಯ ಹಕ್ಕು ನಿರಾಕರಣೆ ಮಾಡಲಾಗುತ್ತಿದೆ. ಜ್ವರ, ಸಾಮಾನ್ಯ ನೋವು ನಿವಾರಕ, ಐವಿ ದ್ರಾವಣ ಹಾಗೂ ಆ್ಯಂಟಿ ಬಯೋಟಿಕ್ ನಿತ್ಯ ಬಳಕೆಯ ಔಷಧಿಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. 1100ಕ್ಕೂ ಹೆಚ್ಚು ಮಾದರಿಯ ಔಷಧಿಗಳು ಜಿಲ್ಲಾ ಉಗ್ರಾಣಗಳಲ್ಲಿ ಔಷಧಿಗಳು ಇರಬೇಕು ಆದರೆ ಕೇವಲ 116ರಿಂದ 120 ಔಷಧಿಗಳು ಇವೆ ಎಂದು ದೂರಿದರು.

ಜೀವ ರಕ್ಷಕ ಔಷಧ ಸೇರಿದಂತೆ ಅಗತ್ಯ ಔಷಧಿಗಳಿಗಾಗಿ ಜಿಲ್ಲಾ ಆಸ್ಪತ್ರೆಗಳಿಗೆ ₹5 ಕೋಟಿ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ₹2 ಕೋಟಿ ಅನುದಾನವನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜನರ ತಲಾ ಆದಾಯ ಬಹಳಷ್ಟು ಕಡಿಮೆ ಇರುವುದರಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ದುರ್ಬಲ ವರ್ಗಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಿಗೆ ₹7 ಕೋಟಿ ಹಾಗೂ ತಾಲೂಕು ಆಸ್ಪತ್ರೆಗಳಿಗೆ ₹3 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಜೀವ ರಕ್ಷಕ ಔಷಧಗಳ ಕೊರತೆ ಸಮಸ್ಯೆ ಮರುಕಳಿಸದಂತೆ ಎಚ್ಚರವಹಿಸಬೇಕು. ಸಿಂಧನೂರಿಗೆ ಮಂಜೂರಾಗಿರುವ 200 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಅತ್ಯಂತ ಶೀಘ್ರವಾಗಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ನಿರ್ಮಾಣ ವಿಳಂಬವಾಗುತ್ತಿದ್ದು, ಕೆಲಸ ಚುರುಕುಗೊಳಿಸಿ ಸಾರ್ವಜನಿಕರ ಸೇವೆ ಶೀಘ್ರ ಆರಂಭಿಸಬೇಕು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕ ಹಾಗೂ ಔಷಧಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಸೇವೆಯಲ್ಲಿದ್ದು, ಸೇವಾವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, ತಾಲ್ಲೂಕು ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಜಿಲಾನಿ ಯರಿಗೇರಾ, ಜಗದೀಶ, ಹನೀಫ್ ಅಬಕಾರಿ, ಭೀಮಣ್ಣ, ಮಹೇಶ ನಾಯಕ, ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News