ವಾಡಿ | ಖಾರದಪುಡಿ ಎರಚಿ 5 ಲಕ್ಷ ರೂ. ದರೋಡೆ
ವಾಡಿ: ಬೈಕ್‌ನಲ್ಲಿ ಸಾಗುತ್ತಿದ್ದ ಇಬ್ಬರ ಮೇಲೆ ಮುಸುಕುಧಾರಿಗಳು ಖಾರದ ಪುಡಿ ಎರಚಿ 5 ಲಕ್ಷ ರೂ. ಹಣ ದೋಚಿದ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಸಮೀಪ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅಲಹಳ್ಳಿಯ ಜ್ಯೋತಿ ವೈನ್‌ಶಾಪ್ ಮ್ಯಾನೇಜರ್ ಬಾಪರೆಡ್ಡಿ ನಾಚವಾರ ಹಾಗೂ ಯಂಕಪ್ಪ ಕಟ್ಟಿಮನಿ ಅವರು 5 ಲಕ್ಷ ರೂ. ಹಣವನ್ನು ತೆಗೆದುಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಲಾಡ್ಲಾಪುರ ಹತ್ತಿರ ಮುಸುಕುಧಾರಿಗಳಿಬ್ಬರು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಚಾಕು ತೋರಿಸಿ ಹಣ ಇರುವ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಹಿತಿ ಪಡೆದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ದೂರು ಶ್ರೀನಿವಾಸಲು, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಪಿ.ಎಸ್. ಹೊನ್ನಂಜೆಕರ, ವಾಡಿ ಪಿಎಸ್‌ಐ ತಿರುಮಲೇಶ ಕೆ ಹಾಗೂ ರೇಣುಕಾ ಉಡಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.