×
Ad

ಹೋರಾಟಕ್ಕೆ ರಾಯಣ್ಣ, ವಿಶ್ವಪ್ರಜ್ಞೆಗೆ ಕನಕದಾಸರು, ಸಾಮಾಜಿಕ ಬದ್ಧತೆಗೆ ಸಿದ್ದರಾಮಯ್ಯ ಅವರ ಮಾದರಿಗಳು ನಮ್ಮ ಜೊತೆಗಿವೆ : ಕೆ.ವಿ.ಪ್ರಭಾಕರ್

ರಾಜ್ಯ ಕನಕ‌ ನೌಕರರ ಸಂಘ ಆಯೋಜಿಸಿದ್ದ ʼಪ್ರತಿಭಾ ಪುರಸ್ಕಾರ ಕಾರ್ಯಕ್ರಮʼ

Update: 2025-09-28 18:29 IST

ಕೋಲಾರ ಸೆ 28 : ನಮ್ಮ ಸಮುದಾಯದ ಪ್ರತಿಭೆಗಳು ಸಮಾಜದ ಆಸ್ತಿಗಳಾಗಿ ಅರಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಕರೆ ನೀಡಿದರು.

ಕರ್ನಾಟಕ ರಾಜ್ಯ ಕನಕ‌ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಕುಲಕ್ಕೆ, ಸಮುದಾಯಕ್ಕೆ ಒಂದು ಶ್ರಮಿಕ ಪರಂಪರೆ ಇದೆ. ಈ ಪರಂಪರೆಯ ಒಳಗೆ ಅದ್ಭುತವಾದ ಮಾದರಿ ವ್ಯಕ್ತಿತ್ವಗಳೂ ಇವೆ. ಛಲ ಮತ್ತು ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಮಾದರಿ ಆದರೆ, ವಿಶ್ವಪ್ರಜ್ಞೆಗೆ ಕನಕದಾಸರು ಮಾದರಿ ಆಗಿದ್ದಾರೆ. ಶಿಕ್ಷಣಕ್ಕೆ ಅಹಲ್ಯಾಬಾಯಿ ಹೋಳ್ಕರ್ ಮಾದರಿಯಾದರೆ, ಸಾಮಾಜಿಕ ಬದ್ಧತೆಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದರಿಯಾಗಿದ್ದಾರೆ. ಈ ಎಲ್ಲಾ ಹಿರಿಯ ಮಾದರಿಗಳು ಸಮಾಜದ ಆಸ್ತಿ ಆಗಿರುವುದು ನಮಗೆಲ್ಲಾ ಹೆಮ್ಮೆ ತರುವ ಜೊತೆಗೆ ಪ್ರೇರಣೆ ಕೂಡ ಆಗಲಿ ಎಂದು ಕರೆ ನೀಡಿದರು.

ಪ್ರತಿಭೆ ಎನ್ನುವುದು ಒಟ್ಟು ಸಮಾಜದ ಕೊಡುಗೆ. ಹೀಗಾಗಿ ಪ್ರತಿಭಾವಂತರು ಸಮಾಜದ ಆಸ್ತಿ ಆಗಬೇಕು ಎನ್ನುವುದು ನನ್ನ ಭಾವನೆ. ಪ್ರತಿಭೆ ಪ್ರತಿಯೊಬ್ಬರ ಒಳಗೂ ಇರುತ್ತದೆ. ಈ ಪ್ರತಿಭೆ ಹೊರಗೆ ಬರುವುದಕ್ಕೆ ಅವಕಾಶ ಮುಖ್ಯ. ನಮ್ಮ ಸಮುದಾಯದ ಹಿರಿಯರು ನಡೆಸಿದ ಹೋರಾಟ, ಮಾಡಿದ ಸಂಘಟನೆ ಕಾರಣಕ್ಕೆ ನಮಗೆ ನಿಮಗೆ ಇಂದು ಅವಕಾಶಗಳು ಸೃಷ್ಟಿಯಾಗಿವೆ. ಆದರೆ ಅವಕಾಶ ವಂಚಿತರು ಇನ್ನೂ ಬಹಳ ಮಂದಿ ಇದ್ದಾರೆ. ಈ ಅವಕಾಶ ವಂಚಿತರ ರಾಯಬಾರಿಗಳಾಗಿ ನೀವು ಬೆಳೆಯಬೇಕು ಎಂದು ಕರೆ ನೀಡಿದರು‌.

ಆದ್ದರಿಂದ ಈ ಅವಕಾಶ ವಂಚಿತರಿಗೆ ಅವಕಾಶ ಸೃಷ್ಟಿಸುವ ದಿಕ್ಕಿನಲ್ಲಿ ನಾವು ನೀವೆಲ್ಲಾ ಶ್ರಮಿಸೋಣ. ನಮಗೆ ಮಾರ್ಗದರ್ಶನ ಮಾಡೋದಕ್ಕೆ ವೇದಿಕೆಯಲ್ಲಿ ಇಷ್ಟೊಂದು ಮಂದಿ ಹಿರಿಯರು, ಗುರುಗಳು ಕುಳಿತಿದ್ದಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ನಮ್ಮ ಪರಂಪರೆಯ ಹಿರಿಮೆಯನ್ನು ಮುನ್ನಡೆಸೋಣ ಎಂದು ಕರೆ ನೀಡಿದರು.

ಅಂಕಪಟ್ಟಿಯ ಅಂಕಗಳಷ್ಟೇ, ನೈತಿಕತೆಯ ಮೌಲ್ಯಗಳೂ ಬಹು ಮುಖ್ಯ. ಈಗ ಡಿಜಿಟಲ್ ತಂತ್ರಜ್ಞಾನದ ಜೊತೆ ಸಂಬಂಧ ಬೆಳೆಸಿಕೊಂಡು ಪೋಷಕರ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಯಾರೋ ಮೇಕಪ್ ಸ್ಟಾರ್ ಗಳಿಗೆ "ಲವ್ ಯು" ಹೇಳುವ ಚಟ ಬಿಟ್ಟು ನಿಮ್ಮ ಬದುಕು, ಭವಿಷ್ಯಕ್ಕಾಗಿ ತಮ್ಮ ತ್ಯಾಗ ಮಾಡಿದ ಅಪ್ಪ-ಅಮ್ಮನಿಗೆ ನೀವು ʼಲವ್ ಯುʼ ಹೇಳಿ ಎಷ್ಟು ವರ್ಷ ಆಯ್ತು ಯೋಚ್ನೆ ಮಾಡಿ. ವೃದ್ದಾಶ್ರಮಗಳು ಹೆಚ್ಚಾಗುವುದು ರೋಗಿಷ್ಟ ಸಮಾಜದ ಲಕ್ಷಣ. ಯಾವುದೇ ಕಾರಣಕ್ಕೂ ಅಪ್ಪ ಅಮ್ಮನನ್ನು ವೃದ್ದಾಶ್ರಮಕ್ಕೆ ತಳ್ಳುವಷ್ಟು ಮಟ್ಟಕ್ಕೆ ಬೆಳೆಯಬೇಡಿ ಎಂದರು.

ಆಸ್ಪತ್ರೆಗಳು ಹೆಚ್ಚಾಗುವುದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ. ಶಾಲೆಗಳು, ಆಟದ ಮೈದಾನಗಳು ಆರೋಗ್ಯವಂತ ಸಮಾಜದ ಲಕ್ಷಣ ಎಂದರು.

ಕಾಗಿನೆಲೆ ಗುರುಪೀಠದ ಶ್ರೀ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ದಿವ್ಯ ಸಾನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಕೊಪ್ಪಳ ವಿವಿಯ ಉಪ ಕುಲಪತಿಗಳಾದ ಬಿ.ಕೆ.ರವಿ, insight ಅಕಾಡೆಮಿಯ ವಿನಯ್ ಕುಮಾರ್, ಮಾಜಿ ಸಚಿವರಾದ ಆರ್.ವರ್ತೂರು ಪ್ರಕಾಶ್ ಸೇರಿ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News