ಬಂಗಾರಪೇಟೆ ಬಳಿ ಭೀಕರ ರಸ್ತೆ ಅಪಘಾತ: ಮೂವರು ಮೃತ್ಯು, 16 ಮಂದಿಗೆ ಗಾಯ
ಕೋಲಾರ: ಟೆಂಪೋ ಟ್ರಾವೆಲರ್ ಗೆ ಈಚರ್ ಲಾರಿ ಢಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, 16 ಜನರು ಗಾಯಗೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಲ್ಕೆರೆ ಸಮೀಪ ನಡೆದಿದೆ.
ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಹತ್ತಿರ ಇರುವ ಚೆನ್ನೈ - ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಸಮೀಪ ಖಾಸಗಿ ಕಂಪೆನಿಯೊಂದರ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಾಣಸಿಗರನ್ನು ಕರೆಸಲಾಗಿತ್ತು. ಸಂಜೆ ವೇಳೆ ಕೆಲಸ ಮುಗಿಸಿಕೊಂಡು ಟೆಂಪೋ ಟ್ರಾವೆಲರ್ ನಲ್ಲಿ ವಾಪಸು ಹೋಗುವ ವೇಳೆ ಕಲ್ಕೆರೆ ಸಮೀಪ ತಿರುವಿನಲ್ಲಿ ಈಚರ್ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂವರು ಬಾಣಸಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ 16 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆಜಿಎಫ್ ಮತ್ತು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾಗಿದ್ದಾರೆ.