ಕೊಪ್ಪಳ | ಬಸ್ ನಿಲ್ಲಿಸದ ಚಾಲಕರ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕೊಪ್ಪಳ : ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ, ಕೆಲವು ಬಸ್ ಗಳು ಇದ್ದರೂ ಚಾಲಕರು ನಿಲ್ಲಿಸದೇ ಹೋಗುತ್ತಿರುವುದರಿಂದ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬೂದಗುಂಪ ಗ್ರಾಮದ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ವಿದ್ಯಾರ್ಥಿಗಳು, “ಇಲ್ಲಿಂದ ಶಾಲಾ ಮತ್ತು ಕಾಲೇಜುಗಳಿಗೆ ಹಲವಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ, ಆದರೆ ಬಸ್‌ಗಳು ನಿಲ್ಲಿಸುವುದಿಲ್ಲ. ನಿಲ್ಲಿಸುವ ಒಂದೆರಡು ಬಸ್‌ಗಳಲ್ಲಿ ವಿದ್ಯಾರ್ಥಿಗಳು ಜೋತುಬಿದ್ದು ಸಾವಿನ ಭಯದ ನಡುವೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಸ್ಥಳೀಯ ಗ್ರಾಮಸ್ಥರೂ ಬೆಂಬಲ ನೀಡಿದರು.
“ಆ ಸಮಯದಲ್ಲಿ 10 ನಿಮಿಷದ ಅಂತರದಲ್ಲಿ ಮೂರು-ನಾಲ್ಕು ಬಸ್‌ಗಳಿವೆ. ವಿದ್ಯಾರ್ಥಿಗಳು ಒಂದೇ ಬಸ್‌ನಲ್ಲಿ ಪ್ರಯಾಣಿಸಲು ಒತ್ತಾಯಿಸುತ್ತಿದ್ದಾರೆ. ಸ್ವಲ್ಪ ಸಮಯ ಬೇಗ ಬಂದರೆ ಬಸ್ ಸಿಗುತ್ತದೆ. ಒಂದು ವೇಳೆ ಬಸ್ ಸೇವೆ ತಡವಾದರೆ ಅದನ್ನು ಸರಿಪಡಿಸಲಾಗುತ್ತದೆ”.
-ಕೆಎಸ್ಆರ್‌ಟಿಸಿ ಡಿಸಿ, ಕೊಪ್ಪಳ