ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ | ಭಯೋತ್ಪಾದಕ ಗುಂಪು ಎಂದು ಘೋಷಿಸಿದ ಕೆನಡಾ
ಭಾರತದೊಂದಿಗೆ ಸಂಬಂಧಗಳ ಮರುಸ್ಥಾಪನೆ ಮಾತುಕತೆಗಳ ಬೆನ್ನಿಗೇ ಕ್ರಮ
Photo Credit : NDTV
ಒಟ್ಟಾವ: ಭಾರತ ಮತ್ತು ವಿದೇಶಗಳಲ್ಲಿ ಹತ್ಯೆ, ಸುಲಿಗೆ, ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆಯೊಂದಿಗೆ ಸಂಪರ್ಕ ಹೊಂದಿರುವ ಭೂಗತ ಲೋಕದ ದೊರೆ ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ಗುಂಪನ್ನು ಕೆನಡಾದ ಕ್ರಿಮಿನಲ್ ಕಾನೂನಿನಡಿ ಭಯೋತ್ಪಾದಕ ಗುಂಪು ಎಂದು ಘೋಷಿಸಲಾಗಿದೆ ಎಂದು ಸೋಮವಾರ ಸಂಜೆ ಕೆನಡಾ ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರೀ ತಿಳಿಸಿದ್ದಾರೆ.
ಈ ಆದೇಶದ ಪ್ರಕಾರ, ಕೆನಡಾದಲ್ಲಿರುವ ಲಾರೆನ್ಸ್ ಬಿಷ್ಣೋಯಿ ಗುಂಪಿನ ನಗದು, ವಾಹನಗಳು ಹಾಗೂ ಆಸ್ತಿಪಾಸ್ತಿಗಳು ಸೇರಿದಂತೆ ಎಲ್ಲ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಆ ಮೂಲಕ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಅಪರಾಧ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಗುಂಪಿನ ವಿರುದ್ಧ ಕೆನಡಾ ಕಾನೂನು ಪ್ರಾಧಿಕಾರಗಳು ಇನ್ನೂ ತೀವ್ರವಾಗಿ ವಿಚಾರಣೆ ನಡೆಸಬಹುದಾಗಿದೆ.
ಅಲ್ಲದೆ, ವಲಸೆ ಅಧಿಕಾರಿಗಳು ಲಾರೆನ್ಸ್ ಗುಂಪಿನ ಶಂಕಿತ ಸದಸ್ಯರಿಗೆ ಕೆನಡಾದೊಳಗೆ ಪ್ರವೇಶವನ್ನೂ ನಿರಾಕರಿಸಬಹುದಾಗಿದೆ.
ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿರುವ ಕೆನಡಾ ಸರಕಾರ, “ಹಿಂಸೆ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಕೆನಡಾದಲ್ಲಿ ಜಾಗವಿಲ್ಲ. ವಿಶೇಷವಾಗಿ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಭೀತಿ ಮತ್ತು ಹೆದರಿಕೆಯ ವಾತಾವರಣವನ್ನು ಸೃಷ್ಟಿಸುವವರಿಗೆ” ಎಂದು ಘೋಷಿಸಿದೆ.
ಜಸ್ಟಿನ್ ಟ್ರೂಡೊರ ಪ್ರಧಾನಿಗಿರಿಯ ಕೊನೆಯ ತಿಂಗಳುಗಳಲ್ಲಿ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಾಂಧವ್ಯ ಹದಗೆಟ್ಟ ನಂತರ ಹಾಗೂ ಲಾರೆನ್ಸ್ ಬಿಷ್ಣೋಯಿಯನ್ನು ಭಯೋತ್ಪಾದಕ ಎಂದು ಘೋಷಿಸುವಂತೆ ಸಾರ್ವಜನಿಕ ಸುರಕ್ಷಾ ಸಚಿವ ಆನಂದಸಂಗರೀಯನ್ನು ಕೆನಡಾ ಸಂಸದ ಫ್ರಾಂಕ್ ಕೆಪುಟಾ ಒತ್ತಾಯಿಸಿದ ನಂತರ ಬಿಡುಗಡೆಯಾಗಿರುವ ಈ ಅಧಿಸೂಚನೆಯು ಭಾರತ ಮತ್ತು ಕೆನಡಾ ಸಂಬಂಧವನ್ನು ಸುಧಾರಿಸುವತ್ತ ಇಟ್ಟಿರುವ ಮತ್ತೊಂದು ಹೆಜ್ಜೆಯಿಂದೇ ವ್ಯಾಖ್ಯಾನಿಸಲಾಗಿದೆ.