×
Ad

ಮಣ್ಣೇ ನಿಜವಾದ ಜ್ಞಾನಪೀಠ-ರೈತಪೀಠ!

Update: 2026-02-15 11:02 IST

ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್ನ ದಾರಿಯ ಅನಂತ ದಾರಿಗಳಿವೆ. ಅಲ್ಲಿ ಉಪನ್ಯಾಸಗಳಿಲ್ಲ; ಆದರೆ ಅನುಭವದ ಶಿಷ್ಯತ್ವವಿದೆ. ಅಲ್ಲಿ ಪ್ರಮಾಣಪತ್ರಗಳಿಲ್ಲ; ಆದರೆ ಬದುಕಿನ ಸತ್ಯವಿದೆ.

ಈ ನೆಲದ ಜ್ಞಾನಪರಂಪರೆಯ ನಿಜವಾದ ವಾಸುದಾರರು ರೈತರೇ. ಆದರೆ ಅವರ ಬದುಕು ಭಾಗಶಃ ಪ್ರಭಾವ, ಪ್ರಶಸ್ತಿ, ಹಣದ ಬಲೆಯ ಹಿಂದೆ ಬಿದ್ದಿಲ್ಲ. ಹಕ್ಕು ಸ್ಥಾಪನೆಯ ಹೋರಾಟವೂ ಬಲವಾಗಿ ನಡೆದಿಲ್ಲ. ಮನೆ ತೋಟ ಹೊಲ ಗದ್ದೆ ಜಗಲಿ...ಇವಷ್ಟೇ ಬಹುಪಾಲು ಕೃಷಿಕರ ವಿಶ್ವ. ತಮ್ಮ ಬದುವಿನ ಬೇರಿನಾಚೆ ಮಾತಾಡಲು ಕೂಡ ಸಂಕೋಚಪಡುವ ಈ ಮಣ್ಣಿನ ಮಕ್ಕಳು ಪ್ರತಿಷ್ಠೆಯ ವೇದಿಕೆಗಳಲ್ಲೂ, ಪ್ರಭೆಯ ಬೆಳಕಿನಲ್ಲೂ ಕಾಣಿಸಿಕೊಳ್ಳದ ಮೌನ ಯೋಧರು.

ಅಂಥ ಕಡಿಮೆ ಗುರುತು, ಕಡಿಮೆ ಪ್ರಶಸ್ತಿ, ಕಡಿಮೆ ಸನ್ಮಾನ ಪಡೆದ ರೈತರಿಗೆ ಒಂದು ಲೋಕಮಾನ್ಯ ಗೌರವ ನೀಡಬೇಕೆಂಬ ಕನಸಿನಿಂದಲೇ ಇದೀಗ ರೈತಪೀಠ ಎಂಬ ಪ್ರಶಸ್ತಿಯೊಂದು ಹುಟ್ಟಿದೆ. ಅದರ ಬೀಜ ಬಿತ್ತಿದವರು ಮೂಡುಬಿದಿರೆಯ ಡಾ. ರಾಮಕೃಷ್ಣ ಆಚಾರ್. ಸೊನ್ನೆಯಿಂದ ಏರಿ ಉದ್ಯಮದ ಶಿಖರವನ್ನೇರಿದರೂ, ಆ ಏರಿಕೆಯ ಅಹಂಕಾರ ಅವರನ್ನು ಎಂದೂ ನೆಲದಿಂದ ದೂರ ಮಾಡಲಿಲ್ಲ; ಬದಲಾಗಿ ಮತ್ತೆ ಮಣ್ಣಿನ ಬಳಿಗೆ ಕರೆತಂದಿತು. ಕಾರ್ಕಳದ ಮುನಿಯಾಲಿನ ಸಂಜೀವಿನಿ ಗೋಧಾಮ ಅವರ ಆ ಮರಳುವಿಕೆಯ ಜೀವಂತ ಸಾಕ್ಷಿ-ಇಂದು ಅದು ರೈತರಿಗೆ ಮಾದರಿ ಕೃಷಿ ಪಾಠಶಾಲೆ.

ಸಂಜೀವಿನಿಗೆ ಕಾಲಿಟ್ಟ ಕ್ಷಣದಿಂದಲೇ ಅದು ಕೇವಲ ತೋಟವಲ್ಲ, ಸಮಗ್ರ ಕೃಷಿಯ ಹಸಿರು ವಿಶ್ವವಿದ್ಯಾನಿಲಯ ಎಂಬ ಅನುಭವ ಉಂಟಾಗುತ್ತದೆ. ಅಲ್ಲಿ ಗಿಡಮರ, ಗೋವು, ಹಕ್ಕಿ, ಮೀನು, ಮನುಷ್ಯ...ಹೀಗೆ ಎಲ್ಲವೂ ಒಂದೇ ಉಸಿರಿನಲ್ಲಿ ಬದುಕುತ್ತವೆ. ನೀರಿನ ಜಾಣ ಬಳಕೆ, ಮಣ್ಣಿನ ಸಂರಕ್ಷಣೆ, ಪುಂಗನೂರು ಹಸು ಸೇರಿ ಗೋವಿನ ಮೌಲ್ಯ-ಇವೆಲ್ಲ ಬದುಕಿನ ಪಾಠಗಳಾಗಿ ಹರಿಯುತ್ತವೆ. ಖಂಡಿತ ಇಲ್ಲಿ ಕೃಷಿ ಉದ್ಯಮವಲ್ಲ; ಅದು ಸಂಸ್ಕೃತಿ, ಸಹಜ ಸಹವಾಸ. ಇಲ್ಲಿಗೆ ಬರುವ ರೈತರು ಮಣ್ಣಿನ ಜೊತೆ ಬದುಕುವುದನ್ನು ಮರುಕಲಿಯುತ್ತಾರೆ. ‘ಈ ದೇಶದ ಕೃಷಿ ಸೋಲುತ್ತಿಲ್ಲ; ನಾವು ಕೃಷಿಯಿಂದ ದೂರ ಸರಿಯುತ್ತಿದ್ದೇವೆ’ ಎಂಬ ಸತ್ಯ ಇಲ್ಲಿ ನಗ್ನವಾಗುತ್ತದೆ.

‘ರೈತಪೀಠ-ಈ ನೆಲದ ಜ್ಞಾನಪೀಠ’ಎಂಬ ನನ್ನ ಹೊಸ ಕೃತಿಯೂ ಇದೇ ತೋಟದ ಹಸಿರು ವಿನ್ಯಾಸ, ಆಶಯ ಎಲ್ಲವನ್ನು ಇಟ್ಟುಕೊಂಡು ಬರೆಯಲಾದ ಯಶೋಗಾಥೆ. ಇದೇ ಫೆಬ್ರವರಿ 20ರಂದು ಸಂಜೀವಿನಿ ವನಾವರಣದಲ್ಲಿ ನಡೆಯುವ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಈ ಕೃತಿಯು ಬಿಡುಗಡೆಗೊಳ್ಳಲಿದೆ. ಕೊಲ್ಲಾಪುರ -ಮಹಾರಾಷ್ಟ್ರದ ಸಿದ್ದಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನಿಮಗೆ ಗೊತ್ತಲ್ಲ? ಆ ಅಸಾಧಾರಣ ಮಣ್ಣು ಮತ್ತು ಪಶು ಪ್ರೇಮಿ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಇಂದು ನಾಗರಿಕ ಜಗತ್ತಿನಿಂದ ದೂರದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಭೂಮಿ ಖರೀದಿಸಿ, ಹಸಿರು ಹಚ್ಚುವ, ಜೊತೆಗೆ ಸುದ್ದಿಯಿಲ್ಲದೆ ಬಂದು ಇಳಿದು ಹೋಗಲು ಹೆಲಿಪ್ಯಾಡ್ ನಿರ್ಮಿಸಿಕೊಂಡ ಉದ್ಯಮಿಗಳನ್ನು ನಾನು ನೋಡಿದ್ದೇನೆ. ನಗರದಲ್ಲಿ ಉದ್ಯಮಕ್ಕೆ ಮಾತ್ರ ಭವಿಷ್ಯವಿದೆ, ಜೀವ ಜೀವನಕ್ಕೆ ನೆಮ್ಮದಿಯ ಉಸಿರಿಲ್ಲ ಎಂದು ಕಾಂಕ್ರಿಟ್ ಕಾಡಿನಿಂದ ಹೊರಬಂದು, ಫಾರ್ಮ್ ಹೌಸ್ ಕಟ್ಟಿಕೊಂಡು, ವಾರಾಂತ್ಯದ ಹವ್ಯಾಸಕ್ಕೆ ಕೃಷಿ ಮಾಡಿಸುವುದನ್ನೇ ಸಾಧನೆ ಎಂದು ಕರೆಯುವ ದಿನಗಳಲ್ಲಿ, ರಾಮಕೃಷ್ಣ ಆಚಾರ್ ಅವರಂತೆ ಸೂಕ್ಷ್ಮವಾಗಿ ಮಣ್ಣಿಗೆ ಮರಳುವುದು, ಕೈ ಕಾಲಿಗೆ ಕೆಸರು ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ.

ಕೃಷಿ ನೆಲ ಸಂಬಂಧಿ ಭತ್ತ, ನೀರು, ಇತ್ಯಾದಿಗಳ ಸಂಸ್ಕರಣ ಯಂತ್ರ -ಉತ್ಪಾದನಾ ಘಟಕಗಳನ್ನು ಕಟ್ಟಿಕೊಂಡ ಆಚಾರ್ ಅವರು ಮತ್ತೆ ನೆಲಕ್ಕೆ ಬಂದಿರುವುದು-ಅವರೊಳಗಿನ ಸಮೃದ್ಧ, ಸಹಜ, ಸುಸ್ಥಿರ ನೆಲದ ಗುಣದಿಂದಲೇ ಎಂಬುವುದು ಖಚಿತವಾದ ಮೇಲೆಯೇ ನಾನು ಕಾಗದದ ಮೇಲೆ ಪೆನ್ನಿಟ್ಟೆ. ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯಲ್ಲಿ ಉದ್ಯಮಿಗಳ, ಶ್ರೀಮಂತರ, ಭೂಮಿಗೆ ದುಡ್ಡು ಸುರಿದು ಆಕಾರ ಬದಲಾಯಿಸುವ ‘ನಾಗರಿಕ ರೈತ’ರ ಬಗ್ಗೆ ಬರೆಯಬಾರದು ಎಂಬ ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡೆ.

ರೈತಪೀಠ ಪ್ರಶಸ್ತಿಯ ಅರ್ಥವೂ ಇದೇ. ಅದು ಬರೀ ಒಂದು ಪದಕವಲ್ಲ. ಒಂದು ಸನ್ಮಾನವಲ್ಲ. ಅದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಕೃಷಿ ಜ್ಞಾನಕ್ಕೆ ಸಲ್ಲಿಸುವ ಗೌರವ. ಅನಾಮಿಕರಾಗಿ ಮೌನವಾಗಿ ದುಡಿಯುವ ಕೈಗಳಿಗೆ ಸಲ್ಲಿಸುವ ಕೃತಜ್ಞತೆ. ಬೆಳಗಿನ ಜಾವ ಹೊಲಕ್ಕೆ ಇಳಿಯುವ ಕಾಲುಗಳಿಗೆ ಸಲ್ಲಿಸುವ ವಂದನೆ. ಇಲ್ಲಿ ಒಂದು ಲಕ್ಷದ ನಗದು ಇದೆ, ಶಾಶ್ವತ ಫಲಕ ಇದೆ. ಮುಂದಿನ ವರ್ಷದಿಂದ ದೇಶ ವ್ಯಾಪಿ ಐದು ಜನರನ್ನು ಗುರುತಿಸಿ ಇದೇ ಮೊತ್ತ, ಮಾನ ಸಲ್ಲಿಸುವ ಉದ್ದೇಶವಿದೆ.

ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್ನ ದಾರಿಯ ಅನಂತ ದಾರಿಗಳಿವೆ. ಅಲ್ಲಿ ಉಪನ್ಯಾಸಗಳಿಲ್ಲ; ಆದರೆ ಅನುಭವದ ಶಿಷ್ಯತ್ವವಿದೆ. ಅಲ್ಲಿ ಪ್ರಮಾಣಪತ್ರಗಳಿಲ್ಲ; ಆದರೆ ಬದುಕಿನ ಸತ್ಯವಿದೆ.

ಅಂಥ ಜ್ಞಾನಪೀಠಕ್ಕೆ ಗೌರವ ಸಲ್ಲಿಸುವ ಒಂದು ಸಣ್ಣ ಪ್ರಯತ್ನವೇ ರೈತಪೀಠ. ಅಲ್ಲಿ ಪ್ರಶಸ್ತಿಗಿಂತ ದೊಡ್ಡ ಸಂಕಲ್ಪವಿದೆ. ರೈತನನ್ನು ಮತ್ತೆ ಸಮಾಜದ ಮಧ್ಯಕ್ಕೆ ತರುವ ಪ್ರಯತ್ನವಿದೆ. ಅವನ ಕೈಗೆ ಮರಳಿ ಗೌರವ ನೀಡುವ, ಅವನ ಜ್ಞಾನವನ್ನು ರಾಷ್ಟ್ರದ ಸಂಪತ್ತಾಗಿ ಗುರುತಿಸುವ ಹಂಬಲವಿದೆ.

ಸಂಜೀವಿನಿ ಗೋಧಾಮ ಆ ದಾರಿಯ ಮೊದಲ ಹೆಜ್ಜೆ. ರೈತಪೀಠ ಅದರ ಮೊದಲ ಘೋಷಣೆ. ಈ ನೆಲದ ಜ್ಞಾನಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಾದರೆ, ರೈತನನ್ನು ಉಳಿಸಿಕೊಳ್ಳಬೇಕು. ರೈತನನ್ನು ಉಳಿಸಿಕೊಳ್ಳಬೇಕಾದರೆ, ಅವನ ಜ್ಞಾನಕ್ಕೆ ಗೌರವ ನೀಡಬೇಕು. ರೈತನನ್ನು ಈ ದೇಶದಲ್ಲಿ ಕಿಂಗ್ ಮಾಡಲು ಹೊರಟ ರಾಮಕೃಷ್ಣರ ಹಿಂದೆ ನಿಲ್ಲಬೇಕೆಂಬ ಕಾರಣಕ್ಕಾಗಿಯೇ ರೈತಪೀಠ ಪುಸ್ತಕವನ್ನು ರಚಿಸಿದ್ದೇನೆ.

ಮೂಲತಃ ರಾಮಕೃಷ್ಣರು ಕುಂದಾಪುರದ ಗಂಗೊಳ್ಳಿಯ ಒಬ್ಬ ಸಾಮಾನ್ಯ ಬಡಗಿಯ ಮಗ. ಐದನೇ ತರಗತಿಯಲ್ಲೇ ಶಾಲೆ ಬಿಟ್ಟು ಕುಲುಮೆಯ ಕಠಿಣ ದುಡಿಮೆ. ತಿಂಗಳಿಗೆ ಮೂವತ್ತು ರೂಪಾಯಿ. ಬೆಂಕಿಯೆದುರು ಕಾಯುತ್ತ, ಸುತ್ತಿಗೆಯ ಬಡಿತದ ನಡುವೆ ಕಳೆಯುವ ಬಾಲ್ಯ. ಆ ದುಡಿಮೆಯ ಬೆವರಿನಿಂದಲೇ ಹುಟ್ಟಿದ ಸ್ವಾಭಿಮಾನ ಮುಂದೆ ಅವರನ್ನು ಮೂಡುಬಿದಿರೆಯ ಕಾಳಿಕಾಂಬ ಫ್ಯಾಬ್ರಿಕೇಷನ್ ಎಂಬ ಜಾಗತಿಕ ಸಂಸ್ಥೆಯ ಸ್ಥಾಪಕರನ್ನಾಗಿ ಮಾಡಿತು.

ಇವತ್ತು ಅವರ ಎಸ್.ಕೆ.ಎಫ್. ಹೆಸರಿನ ಭತ್ತ, ಕುಡಿನೀರು ಮತ್ತು ಕೊಳಚೆ ನೀರು ಸಂಸ್ಕರಣ ಯಂತ್ರಗಳು ಪ್ರಪಂಚದ ಇಪ್ಪತ್ತೈದು ದೇಶಗಳಿಗೆ ರಫ್ತಾಗುತ್ತಿವೆ. ಸಾವಿರಾರು ಕಾರ್ಮಿಕರಿಗೆ ಬದುಕು ಕೊಟ್ಟಿವೆ. ಕೋಟ್ಯಂತರ ರೈತರ ಬದುಕು- ಬೆಳೆಗೆ ಆ ಯಂತ್ರಗಳು ಕೈಜೋಡಿಸುತ್ತಿವೆ. ಇಷ್ಟಾದರೂ ಅವರ ಒಳಗಿನ ರೈತ ಸತ್ತಿಲ್ಲ. ಉದ್ಯಮದ ಮಧ್ಯೆ ಅವರು ಕಂಡದ್ದು, ನಮ್ಮ ದೇಶದ ರೈತನು ದಿನೇ ದಿನೇ ಕೀಳರಿಮೆಯ ಬದುಕಿಗೆ ಜಾರುತ್ತಿರುವ ದೃಶ್ಯ. ಸಾಲದ ಬಲೆ, ಹವಾಮಾನ ವೈಫಲ್ಯ, ಬೆಲೆ ಕುಸಿತ, ಅವಮಾನ, ಆತ್ಮಹತ್ಯೆಗಳು. ಇದನ್ನೆಲ್ಲ ಹತ್ತಿರದಿಂದ ಕಂಡವರೇ ಆಚಾರ್.

ಕೃಷಿಕೇಂದ್ರಿತ ಜಗತ್ತಿನ 32 ದೇಶಗಳನ್ನು ಸುತ್ತಿದಾಗ ಅವರು ಕಂಡದ್ದು: ಅಲ್ಲೆಲ್ಲ ರೈತ ರಾಜ. ಅವನದ್ದು ಗೌರವ, ಮಾನ್ಯತೆ, ಸುಸ್ಥಿರ ಬದುಕು. ಅಲ್ಲಿ ಕೃಷಿಗೆ ಸರಕಾರದ ಸಂಪೂರ್ಣ ಬೆಂಬಲವಿದೆ. ಅನ್ನದ ಕೆಲಸವೇ ಸಮಾಜದ ಶ್ರೇಷ್ಠ ಕೆಲಸ. ನಮ್ಮ ದೇಶದಲ್ಲೂ ರೈತ ರಾಜನಾಗಬೇಕು ಎಂಬ ಆಕಾಂಕ್ಷೆಯೇ ಅವರೊಳಗಿನ ರೈತಪೀಠದ ಬೀಜ.

ರೈತಪೀಠ ಅಂದರೆ ಕೇವಲ ಪ್ರಶಸ್ತಿ ಅಲ್ಲ. ಅದು ಒಂದು ಸಾಂಸ್ಕೃತಿಕ ಘೋಷಣೆ. ಅನ್ನವೇ ಜೀವನದ ಮೂಲ ಎಂದು ಸಮಾಜಕ್ಕೆ ನೆನಪಿಸುವ ಪ್ರತಿಜ್ಞೆ. ಕೃಷಿಯ ಘನತೆಯನ್ನು ಮರಳಿ ಸ್ಥಾಪಿಸುವ ಸಂಕಲ್ಪ. ಮುನಿಯಾಲಿನ ಸಂಜೀವಿನಿ ಗೋ-ಧಾಮದಲ್ಲಿ ಬರೀ ಸಾಕು ಪ್ರಾಣಿಗಳಷ್ಟೇ ಅಲ್ಲ, ರಂಬುಟಾನ್, ಮ್ಯಾಂಗೋಸ್ಟೀನ್, ಅಡಿಕೆ, ತೆಂಗು, ಕಾಳುಮೆಣಸು, ಹಲಸು, ಮಾವು, ಪಪ್ಪಾಯಿ, ತರಕಾರಿ-ಏಕಬೆಳೆ ಅಲ್ಲ, ಬಹುಬೆಳೆ. ಮಧ್ಯೆ ಮಧ್ಯೆ ಅಂತರಬೆಳೆ. ಹಸುವಿನ ಗೊಬ್ಬರ, ಗಂಜಳ, ಜೀವಾಮೃತ ಇವೆಲ್ಲವನ್ನು ಸರಳವಾಗಿ ಮಣ್ಣಿಗೆ ಮರಳಿಸಿ ಜೀವ ಕೊಡುವ ವ್ಯವಸ್ಥೆಯಿದೆ. ನಾಗಬನವನ್ನು ಕಾಂಕ್ರಿಟ್ ಮಾಡದೆ, ಕಾಡಿನಂತೆ ಉಳಿಸಿಕೊಂಡು, ಮಿಯಾವಾಕಿ ಮಾದರಿಯ ಹಸಿರು ಕಾಡನ್ನು ಬೆಳೆಸಿ, ಪರಿಸರದ ಸಮತೋಲನಕ್ಕೆ ಕೈಜೋಡಿಸಿರುವ ಅಪರೂಪದ ಪ್ರಯತ್ನವಿದೆ.

‘‘ನನ್ನ ತೋಟಕ್ಕೆ ಬಂದ ಮಗು, ಕೃಷಿಕನಾಗಬೇಕು ಅನ್ನುವ ಕನಸಿನಿಂದಲೇ ಹೊರಹೋಗಬೇಕು’’ ಎನ್ನುವುದು ಆಚಾರ್ ಅವರ ಆಶಯ. ಇಲ್ಲಿ ಮಕ್ಕಳು ಹಸು ಮುದ್ದಿಸಬಹುದು, ಹಾಲು ಕರೆಯಬಹುದು, ಬೀಜ ಬಿತ್ತಬಹುದು, ಮಣ್ಣಲ್ಲಿ ಕೈ ಹಾಕಬಹುದು, ಮೀನುಗಳ ಜೊತೆ ಆಟವಾಡಬಹುದು. ಕೃಷಿಯನ್ನು ಪುಸ್ತಕದಲ್ಲಿ ಅಲ್ಲ, ಬದುಕಿನಲ್ಲಿ ಕಲಿಯುವ ವ್ಯವಸ್ಥೆಯಿದು. ಇವತ್ತು ಹಳ್ಳಿಯಿಂದ ನಗರಕ್ಕೆ ಓಡುತ್ತಿರುವ ಹೊಸ ತಲೆಮಾರಿಗೆ ಸಂಜೀವಿನಿ ಗೋ-ಧಾಮ ಒಂದು ಮೌನದ ಕರೆ: ಸುಖ ಕೇವಲ ದುಡ್ಡಿನಲ್ಲಿ ಇಲ್ಲ. ನೆಲದ ಜೊತೆ ಬದುಕುವುದರಲ್ಲೇ ನಿಜವಾದ ನೆಮ್ಮದಿ. ರೈತಪೀಠ ಆ ಕರೆಯ ಅಧಿಕೃತ ಘೋಷಣೆ.

ಒಂದು ಕಾಲದಲ್ಲಿ ಅಕ್ಕಿಯ ಗಿರಣಿಗಳೆಂದರೆ ನಮ್ಮಲ್ಲಿ ಮೂಡುಬಿದಿರೆ-ಹೆಬ್ರಿ -ಕಾರ್ಕಳದ ಹೆಸರು ಕೇಳಿಬರುತ್ತಿತ್ತು. ಹಳ್ಳಿಗಳಲ್ಲೇ ಚಿಕ್ಕ ಚಿಕ್ಕ ಯಂತ್ರಗಳು, ದಿನಕ್ಕೆ ಒಂದೆರಡು ಟನ್ ಭತ್ತ ಸಂಸ್ಕರಿಸುವ ಸ್ವಾವಲಂಬಿ ಘಟಕಗಳು ಇದ್ದವು. ಇವತ್ತು ಅವೆಲ್ಲ ಅಟ್ಟಕ್ಕೆ ಸೇರಿವೆ. ಮಾಲ್‌ಗಳಲ್ಲಿ ಹೊಳೆಯುವ ಪ್ಯಾಕೆಟ್‌ಗಳಲ್ಲಿರುವ ಬಿಳಿ ಬಿಳಿ ಅಕ್ಕಿಯ ಮೂಟೆಗಳೇ ನಮ್ಮ ಆಹಾರ ಸಂಸ್ಕೃತಿಯ ಪ್ರತಿನಿಧಿಗಳಾಗಿವೆ.

ಆಚಾರ್ ಅವರು ಹೇಳುವ ಮಾತು ಸರಳ :

ಜನರಿಗೆ ಇವತ್ತು ಪೌಷ್ಟಿಕಾಂಶಕ್ಕಿಂತ ಬಣ್ಣ ಬೇಕು, ಸಹಜತೆಗಿಂತ ಹೊಳಪು ಬೇಕು. ತುಪ್ಪ ಹಳದಿ ಇರಬೇಕು, ಅನ್ನ ಬಿಳಿಯಾಗಿರಬೇಕು, ಕೇಸರಿಬಾತ್ ಕೇಸರಿಯಾಗಿರಬೇಕು. ರುಚಿಯ ಹಿಂದೆ ಓಡುತ್ತಾ ನಾವು ಆಹಾರದ ಆತ್ಮವನ್ನೇ ಕಳೆದುಕೊಳ್ಳುತ್ತಿದ್ದೇವೆ. ಈ ಸತ್ಯ ಅವರಿಗೆ ಕೈಗೆ ಸಿಕ್ಕದ್ದಲ್ಲ; ಅಕ್ಕಿಯಂತ್ರಗಳ ನಡುವೆ ಬೆಳೆದ, ಕಾರ್ಮಿಕನಾಗಿ ದುಡಿದ ಅನುಭವದಿಂದ ಹುಟ್ಟಿದ್ದು,.ಅದೇ ಅರಿವಿನಿಂದಾಗಿ ಅವರ ಒಳಗಡೆಯಿಂದ ಒಂದು ಸುಂದರವಾದ ಹಸಿರು ವನಾವರಣ ಹುಟ್ಟಿಕೊಂಡಿದೆ. ಇದರ ಒಳಗಡೆಯಿಂದಲೇ ‘ರೈತಪೀಠ’ ಪ್ರಶಸ್ತಿಯ ಕಲ್ಪನೆ ಹುಟ್ಟಿದೆ. ಕೃಷಿ ಎಂದರೆ ಹಳೆಯದು, ಲಾಭವಿಲ್ಲದ್ದು ಎಂಬ ಭ್ರಮೆಗೆ ಸವಾಲು ಹಾಕಲು, ನೆಲವನ್ನು ನಂಬಿದ ಕೃಷಿಕರನ್ನು ಗೌರವಿಸಲು, ಯುವಕರಿಗೆ ದಾರಿ ತೋರಿಸಲು ಈ ಪ್ರಶಸ್ತಿ. ಇದು ಕೇವಲ ನಗದು ಬಹುಮಾನವಲ್ಲ; ಕೃಷಿಗೆ ಮರಳಿ ಘನತೆ ತರುವ ಒಂದು ಸಾಂಸ್ಕೃತಿಕ ಪ್ರಯತ್ನ. ರೈತಪೀಠ ಅನ್ನುವುದು ವಿಶ್ವವಿದ್ಯಾನಿಲಯಗಳಲ್ಲಿರುವ ಪೀಠಗಳಂತೆಯೇ - ಆದರೆ ಇಲ್ಲಿ ಅಧ್ಯಯನದ ವಿಷಯ ಪುಸ್ತಕವಲ್ಲ, ಮಣ್ಣು.

ರಾಮಕೃಷ್ಣ ಆಚಾರ್ ಅವರಿಗೆ ಕೃಷಿ ಒಂದು ಹವ್ಯಾಸ. ಆದರೆ ಅದು ಲಘುವಾದ ಹವ್ಯಾಸವಲ್ಲ; ಅದು ಬದುಕಿನ ಅರ್ಥ ಹುಡುಕುವ ಪ್ರಯತ್ನ. ಉದ್ಯಮ, ಮಾರುಕಟ್ಟೆ, ಬಂಡವಾಳ - ಇವೆಲ್ಲದರ ನಡುವೆ ಸಿಕ್ಕ ನೆಮ್ಮದಿಯ ದ್ವೀಪವೇ ಸಂಜೀವಿನಿ ವನ. ಇಲ್ಲಿ ಅವರು ಗಿಡಗಳೊಂದಿಗೆ ಮಾತನಾಡುತ್ತಾರೆ, ಹಸುಗಳ ಕಣ್ಣಲ್ಲಿ ತಾವು ಬದುಕಿನ ಸತ್ಯವನ್ನು ಹುಡುಕುತ್ತಾರೆ. ಕಾರ್ಖಾನೆಯ ಶಬ್ದದಿಂದ ದೂರ, ಹಕ್ಕಿಗಳ ಕಲರವದ ನಡುವೆ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ.

ರೈತಪೀಠ ಪ್ರಶಸ್ತಿ ಅವರ ಈ ಆತ್ಮಯಾನದ ಸಾಮಾಜಿಕ ವಿಸ್ತರಣೆ. ‘‘ನನ್ನದು ನನ್ನ ಕುಟುಂಬ, ನನ್ನ ಮಕ್ಕಳು ಎನ್ನುವ ವೃತ್ತದಿಂದ ಹೊರಬಂದು, ಸಮಾಜದ ನೆಲೆಯನ್ನು ನಂಬಬೇಕು’’ ಎನ್ನುವ ಅವರ ತತ್ವದ ಪ್ರತಿಫಲ. ರತನ್ ಟಾಟಾ ಉದಾಹರಣೆಯಂತೆ -ವ್ಯಕ್ತಿ ಹೋದರೂ ವ್ಯವಸ್ಥೆ ಉಳಿಯಬೇಕು. ಅದಕ್ಕಾಗಿಯೇ ಅವರು ಕಟ್ಟುತ್ತಿರುವುದು ಕೇವಲ ತೋಟವಲ್ಲ, ಒಂದು ಚಿಂತನೆ.

ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೆಂಬ ಆತಂಕದ ನಡುವೆ, ರಾಮಕೃಷ್ಣ ಆಚಾರ್ ಅವರ ಸಂಜೀವಿನಿ ವನ ಒಂದು ಭರವಸೆಯ ಹಸಿರು ಕಿರಣ. ನೆಲವನ್ನು ನಂಬಿದರೆ ಬದುಕು ಕೈ ಬಿಡುವುದಿಲ್ಲ ಎಂಬುದಕ್ಕೆ ಅದು ಜೀವಂತ ಸಾಕ್ಷಿ. ರೈತಪೀಠ ಆ ಭರವಸೆಗೆ ಕೊಟ್ಟ ಗೌರವ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News